ನವದೆಹಲಿ[ಸೆ.17]: ಅಧಿಕ ರಕ್ತದೊತ್ತಡ ಸಮಸ್ಯೆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಕಚೇರಿಯಿಂದ ಶನಿವಾರ ಮಧ್ಯಾಹ್ನ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಆರೋಗ್ಯ ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಸೋಮವಾರವೂ ಚಿಕಿತ್ಸೆ ಮುಂದುವರಿಸಲಾಗಿದೆ.

ಇ.ಡಿ. ವಿಚಾರಣೆ ವೇಳೆಯಲ್ಲೇ ಭಾರಿ ರಕ್ತದೊತ್ತಡ ಕಂಡುಬಂದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್‌ ಅಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಕೆಮ್ಮು, ಎದೆನೋವು ಇತ್ಯಾದಿ ಸಮಸ್ಯೆಗಳಿಂದ ಬಳಲಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಭಾನುವಾರ ಅವರನ್ನು ಹೃದಯ ಚಿಕಿತ್ಸಾ ಘಟಕಕ್ಕೆ ಸೇರಿಸಲಾಗಿತ್ತು.

ಸೋಮವಾರ ಮಧ್ಯಾಹ್ನ ಅವರನ್ನು ವಿವಿಧ ಸ್ಕ್ಯಾ‌ನಿಂಗ್‌ಗಾಗಿ ಅಸ್ಪತ್ರೆಯ ಆವರಣದಲ್ಲಿರುವ ಸ್ಕ್ಯಾ‌ನಿಂಗ್‌ ಕೇಂದ್ರಗಳಿಗೆ ಸಕಲ ಭದ್ರತೆಯೊಂದಿಗೆ ಗಾಲಿ ಕುರ್ಚಿಯಲ್ಲಿ ಕೊಂಡೊಯ್ಯಲಾಗಿತ್ತು. ಬಳಿಕ ಮತ್ತೆ ಹ್ರದ್ರೋಗ ಘಟಕಕ್ಕೆ ಕರೆ ತರಲಾಯಿತು. ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗುವ ಅವಕಾಶವನ್ನು ಅವರ ಕುಟುಂಬದ ವೈದ್ಯ ಡಾ.ರಂಗನಾಥ್‌ ಅವರಿಗೆ ಮಾತ್ರ ನೀಡಲಾಗಿದೆ.