ಮುಂಬೈ[ಜು.10]: ರಾಜ್ಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಗಳು ನಡೆಯುತ್ತಿದೆ. ಈಗಾಗಲೇ ದೋಸ್ತಿಗೆ ಗುಡ್‌ಬೈ ಹೇಳಿರುವ ಅತೃಪ್ತ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದರು. ಇದರ ಬೆನ್ನಲ್ಲೇ ಮುಂಬೈನಲ್ಲಿದ್ದ ಅತೃಪ್ತ ಶಾಸಕರ ಮನವೊಲಿಸಲು ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಕೂಡಾ ಇಂದು ಮುಂಬೈ ಹೊಟೇಲ್ ಆವರಣಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ ಡಿಕೆಶಿ ಎಂಟ್ರಿ ಕೊಟ್ಟ ಬೆನ್ನಲ್ಲೇ ಹೊಟೇಲ್‌ನಲ್ಲಿದ್ದ ಅತೃಪ್ತ ಶಾಸಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಹೌದು ಬುಧವಾರ ಬೆಳ್ಳಂ ಬೆಳಗ್ಗೆ ಮುಂಬೈನಲ್ಲಿ ಹೈಡ್ರಾಮಾವೇ ನಡೆದಿದೆ. ಅತೃಪ್ತ ಶಾಸಕರ ಮನವೊಲಿಸಲು ಡಿಕೆ ಶಿವಕುಮಾರ್ ಮುಂಬೈಗೆ ಎಂಟ್ರಿ ಕೊಟ್ಟಿದ್ದರು. ಆದರೆ ಶಾಸಕರು ಉಳಿದುಕೊಂಡಿದ್ದ ಹೊಟೇಲ್ ಗೇಟ್ ಬಳಿ ತಲುಪುತ್ತಿದ್ದಂತೆಯೇ ಪೊಲೀಸರು ಅವರನ್ನು ತಡೆದಿದ್ದರು. ತನು ಹೊಟೇಲ್ ರೂಂ ಬುಕ್ ಮಾಡಿದ್ದೇನೆ ಎಂದು ಹೇಳಿದರೂ ಪೊಲೀಸರು ಅವರನ್ನು ಹೊಟೇಲ್ ಪ್ರವೇಶಿಸಲು ಬಿಟ್ಟಿರಲಿಲ್ಲ. ಆದರೆ ಹಠ ಬಿಡದ ಡಿಕೆಶಿ ಹೊಟೇಲ್ ಪ್ರವೇಶ ದ್ವಾರದ ಬಳಿಯೇ ನಿಂತುಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಡಿಕೆಶಿಗೆ ಹೊಟೇಲ್ ಪ್ರವೇಶಿಸಲು ಅವಕಾಶ ನೀಡಲಾಗಿದೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ಡಿಕೆಶಿಗೆ ಹೊಟೇಲ್ ಪ್ರವೇಶಿಸಲು ನೀಡುವ ಮುನ್ನವೇ ಅತೃಪ್ತ ಶಾಸಕರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ ಎಂಬ ಮಾತುಗಳು ಸದ್ದು ಮಾಡುತ್ತಿವೆ. ಡಿಕೆಶಿ ಎಂಟ್ರಿಯಿಂದ ಶಾಸಕರು ತಮ್ಮ ನಿರ್ಧಾರವನ್ನು ಬದಲಾಯಿಸುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ ಅತೃಪ್ತರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ ಎನ್ನಲಾಗಿದೆ. 

ಒಟ್ಟಾರೆಯಾಗಿ ರಾಜಕೀಯ ವಲಯದಲ್ಲಿ ಮಹತ್ತರ ಬೆಳವಣಿಗಗಳಾಗುತ್ತಿದ್ದು, ಮುಂದೆ ಇದು ಯವ ಸ್ವರೂಪ ಪಡೆದುಕೊಳ್ಳಲಿದೆ ಎಂಬುವುದನ್ನು ಕಾದು ನೋಡಬೇಕಷ್ಟೆ.