ವಿಧಾನಸಭೆ [ಜು.19] :  ವಿಶ್ವಾಸಮತಯಾಚನೆ ಸಮರದಲ್ಲಿ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಕಲಾಪ ಮುಂದೂಡಿಕೆಯಾಗಿದ್ದ ಅವಧಿಯಲ್ಲಿ ಪ್ರತಿಪಕ್ಷದ ನಾಯಕರೊಂದಿಗೆ ಆತ್ಮೀಯತೆಯಿಂದ ಚರ್ಚೆ ನಡೆಸಿದ್ದು ಎಲ್ಲರ ಗಮನ ಸೆಳೆಯಿತು.

ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಮತ್ತು ಶಾಸಕ ಶ್ರೀರಾಮುಲು ಜತೆ ಡಿ.ಕೆ.ಶಿವಕುಮಾರ್‌ ಗಂಭೀರವಾಗಿ ಚರ್ಚೆ ನಡೆಸಿದರು. ಸರ್ಕಾರ ಅಳಿವು-ಉಳಿವಿನ ಪರಿಸ್ಥಿತಿಯಲ್ಲಿರುವಾಗ ಡಿ.ಕೆ.ಶಿವಕುಮಾರ್‌ ಪ್ರತಿಪಕ್ಷ ನಾಯಕರೊಂದಿಗೆ ಈ ರೀತಿ ಆತ್ಮೀಯತೆಯಿಂದ ಸಮಾಲೋಚನೆ ನಡೆಸಿದ್ದು ಹಲವರ ಕುತೂಹಲಕ್ಕೆ ಕಾರಣವಾಯಿತು. 

ಗುರುವಾರ ಮಧ್ಯಾಹ್ನ ಸದನವನ್ನು ಭೋಜನಕ್ಕಾಗಿ ಮುಂದೂಡಿದಾಗ ಶ್ರೀರಾಮುಲು ಮಾತ್ರ ಸದನದೊಳಗಿದ್ದರು. ಡಿ.ಕೆ.ಶಿವಕುಮಾರ್‌ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೂ ನಿಮಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲ್ಲ. ರಮೇಶ್‌ ಜಾರಕಿಹೊಳಿ ಪ್ರಮುಖ ಆಕಾಂಕ್ಷಿ, ಮೈತ್ರಿ ಸರ್ಕಾರಕ್ಕೆ ಸಹಕಾರ ನೀಡಿದರೆ ನಿಮಗೆ ಡಿಸಿಎಂ ಸ್ಥಾನ ನೀಡುತ್ತೇವೆ ಎಂದು ಕಿಚಾಯಿಸಿದರು.