ಬೆಂಗಳೂರು [ಆ.03]:  ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಮುನಿರತ್ನ ಅವರನ್ನು ನಾನು ಭೇಟಿ ಮಾಡಿಲ್ಲ. ಅದೆಲ್ಲಾ ಯಾರದ್ದೋ ಸೃಷ್ಟಿಯಷ್ಟೇ. ಆ ಬಗ್ಗೆ ದಾಖಲೆ ಇದ್ದರೆ ಬಹಿರಂಗಪಡಿಸಲಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವ ಮುನಿರತ್ನ ಅವರನ್ನೂ ಭೇಟಿ ಮಾಡಿಲ್ಲ. ಭೇಟಿ ಬಗ್ಗೆ ಏನಾದರೂ ವಿಡಿಯೋ, ದಾಖಲೆಗಳಿದ್ದರೆ ತೋರಿಸಿ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಯಾವ ಪಕ್ಷಕ್ಕೆ ಹೋಗುತ್ತಾರೋ ಗೊತ್ತಿಲ್ಲ ಎಂದರು. ಬಿಜೆಪಿಯವರು ಇನ್ನಷ್ಟು ಕಾಂಗ್ರೆಸ್‌ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರಂತಲ್ಲಾ ಎಂಬ ಪ್ರಶ್ನೆಗೆ, ಹಾಗಂತ ಪೇಪರ್‌ನಲ್ಲಿ ನೋಡಿದ್ದೇನೆ. ಎಷ್ಟು ಜನ ಬೇಕೋ ಎಲ್ಲರನ್ನೂ ತೆಗೆದುಕೊಂಡು ಹೋಗಲಿ ಎಂದರು.

ಸಿದ್ದಾರ್ಥ ಸಾವಿನ ಬಗ್ಗೆ ಸುಳ್ಳು ಸುದ್ದಿ ನಿಲ್ಲಿಸಿ

ಉದ್ಯಮಿ ಸಿದ್ಧಾರ್ಥ್ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಸರಿಯಲ್ಲ. ಒಬ್ಬ ವ್ಯಕ್ತಿ ಸಾವನ್ನಪ್ಪಿದ ಮೇಲೆ ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸುವುದರಿಂದ ಅವರ ಆತ್ಮಕ್ಕೆ ನೋವು, ಆತ್ಮಗೌರವಕ್ಕೆ ಚ್ಯುತಿ ಉಂಟಾಗುತ್ತದೆ. ಅಂತಹ ಕೆಲಸವನ್ನು ಯಾರೂ ಮಾಡಬಾರದು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ. ಅಸಹಜ ಸಾವನ್ನಪ್ಪಿರುವ ಉದ್ಯಮಿ ಸಿದ್ಧಾರ್ಥ್ ಮತ್ತು ತಮ್ಮ ನಡುವಿನ ಸಂಬಂಧದ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ತಮ್ಮಿಬ್ಬರ ನಡುವೆ ಸಣ್ಣ-ಪುಟ್ಟವ್ಯವಹಾರ ಇದ್ದದ್ದು ನಿಜ ಎಂದಿದ್ದಾರೆ.