Asianet Suvarna News Asianet Suvarna News

ನನಗೆ ನ್ಯಾಯ ಕೊಡಿಸಿ: ಗ್ರಾಮಸ್ಥರ ಕನಸಲ್ಲಿ ಮೃತ ಡಿ.ಕೆ.ರವಿ

 ಐಎಎಸ್‌ ಅಧಿಕಾರಿ ಡಿ.ಕೆ.ರವಿ ಅವರ ಸಾವು ಬಿಟ್ಟುಹೋದ ಪ್ರಶ್ನೆಗಳಿಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ತನಿಖಾಧಿಕಾರಿಗಳು ಏನೇ ವರದಿ ನೀಡಿದರೂ ಡಿ.ಕೆ.ರವಿ ಅವರದು ಸಹಜ ಸಾವೋ ಅಥವಾ ಕೊಲೆಯೋ ಎನ್ನುವ ಬಗೆಗಿನ ಚರ್ಚೆ ಈಗಲೂ ನಿಂತಿಲ್ಲ. ಇದರ ನಡುವೆಯೇ ಈಗ ಹೊಸದೊಂದು ಸುದ್ದಿ ಹರಡಿದೆ. 

DK Ravi Appear In Villagers Dream Every Amavasye
Author
Bengaluru, First Published Oct 9, 2018, 7:30 AM IST
  • Facebook
  • Twitter
  • Whatsapp

ಕುಣಿಗಲ್‌ :  ಜನಾನುರಾಗಿ, ದಕ್ಷ ಅಧಿಕಾರಿಯೆಂದು ಹೆಸರುಗಳಿಸಿದ್ದ ಐಎಎಸ್‌ ಅಧಿಕಾರಿ ಡಿ.ಕೆ.ರವಿ ಅವರ ಸಾವು ಬಿಟ್ಟುಹೋದ ಪ್ರಶ್ನೆಗಳಿಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ತನಿಖಾಧಿಕಾರಿಗಳು ಏನೇ ವರದಿ ನೀಡಿದರೂ ಡಿ.ಕೆ.ರವಿ ಅವರದು ಸಹಜ ಸಾವೋ ಅಥವಾ ಕೊಲೆಯೋ ಎನ್ನುವ ಬಗೆಗಿನ ಚರ್ಚೆ ಈಗಲೂ ನಿಂತಿಲ್ಲ. ಇದರ ನಡುವೆಯೇ ಈಗ ಹೊಸದೊಂದು ಸುದ್ದಿ ಡಿ.ಕೆ.ರವಿ ಅವರ ಸ್ವಗ್ರಾಮ ತುಮಕೂರು ಜಿಲ್ಲೆಯ ದೊಡ್ಡ ಕೊಪ್ಪಲಿನಲ್ಲಿ ಕೇಳಿಬಂದಿದೆ. ಅದು ರವಿ ಆತ್ಮವಾಗಿ ಮರಳಿ ಬಂದಿದ್ದಾರಂತೆ! ಎಂಬುದು.

ಹೌದು, ಮಹಾಲಯ ಅಮಾವಾಸ್ಯೆ ವೇಳೆಗೆ ಮೃತ ವ್ಯಕ್ತಿಗಳು ಮತ್ತೆ ಆತ್ಮವಾಗಿ ಬರುತ್ತಾರೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಅದರಂತೆ ಡಿ.ಕೆ.ರವಿ ಈಗ ವಾಪಸ್‌ ಬಂದಿದ್ದಾರೆ ಎಂದು ರವಿ ಹುಟ್ಟೂರು ದೊಡ್ಡಕೊಪ್ಪಲಿನ ಜನ ಹೇಳುತ್ತಿದ್ದಾರೆ. ಗ್ರಾಮದ ನಾಲ್ಕೈದು ನಿವಾಸಿಗಳ ಕನಸಲ್ಲಿ ಆಗಾಗ ರವಿ ಕಾಣಿಸಿಕೊಳ್ಳುತ್ತಿದ್ದಾರಂತೆ, ‘ನನಗೆ ಅನ್ಯಾಯವಾಗಿದೆ, ನ್ಯಾಯ ದೊರಕಿಸಿಕೊಡಿ’ ಎಂದು ಒತ್ತಾಯಿಸುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳುತ್ತಿದ್ದಾರೆ.

2015ರ ಮಾರ್ಚ್ 16ರಂದು ರವಿ ಅವರು ಬೆಂಗಳೂರಿನಲ್ಲಿ ತಾವು ವಾಸವಿದ್ದ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ವೇಳೆ ರವಿ ಅವರದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಆರೋಪ ಬಲವಾಗಿ ಕೇಳಿಬಂದಿತ್ತು. ಆಗ ಸಿದ್ದರಾಮಯ್ಯ ಸರ್ಕಾರದಲ್ಲಿದ್ದ ಸಚಿವರೊಬ್ಬರ ಮೇಲೆ ಈ ಸಂಬಂಧ ಗಂಭೀರ ಆರೋಪಗಳೂ ಕೇಳಿಬಂದಿತ್ತು. ನಂತರ ಜನರ ಹೋರಾಟ ಹಾಗೂ ಪ್ರತಿಪಕ್ಷಗಳ ಒತ್ತಾಯದ ಮೇರೆಗೆ ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಬಿಐ ರವಿ ಅವರದು ಆತ್ಮಹತ್ಯೆ ಎಂದು ವರದಿ ನೀಡಿತ್ತು. ಇದಾಗಿ ಮೂರು ವರ್ಷ ಗತಿಸಿದರೂ ರವಿ ಅವರದು ಆತ್ಮಹತ್ಯೆ ಎಂಬುದನ್ನು ಬಹುತೇಕರು ಒಪ್ಪುತ್ತಲೇ ಇಲ್ಲ. ಅಸಹಜ ಸಾವು ಎಂದೇ ವಾದಿಸುತ್ತಿದ್ದಾರೆ.

ಕನಸಲ್ಲಿ ಕಾಡುತ್ತಿದ್ದಾರೆ ರವಿ:

ಕೆಲ ದಿನಗಳಿಂದ ದೊಡ್ಡಕೊಪ್ಪಲು ಗ್ರಾಮದ ಕೆಲ ಮಂದಿಯ ಕನಸಿನಲ್ಲಿ ಡಿ.ಕೆ.ರವಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇವರಲ್ಲಿ ಬಹುತೇಕರು ರವಿ ಆತ್ಮೀಯರೇ ಆಗಿದ್ದಾರೆ. ‘ನನಗೆ ನ್ಯಾಯ ಸಿಗಲಿಲ್ಲ, ಅನ್ಯಾಯವಾಗಿದೆ’ ಎಂದು ಹೇಳಿಕೊಂಡು ರವಿ ಎದುರು ನಿಂತು ಕಣ್ಣೀರು ಹಾಕುತ್ತಾರಂತೆ. ರಾತ್ರಿ ವೇಳೆ ಹೊಲ-ಗದ್ದೆ ಬಳಿ ಹೋದಾಗ ಯಾರೋ ಹಿಂಬಾಲಿಸಿದಂತೆ ಭಾಸವಾಗುತ್ತಿದೆ, ಅದು ರವಿಯೇ ಇರಬೇಕು ಎನ್ನುತ್ತಾರೆ ಗ್ರಾಮಸ್ಥರು.

‘ನನಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಕನಸಿನಲ್ಲಿ ಬಂದು ರವಿ ಹೇಳುತ್ತಿದ್ದಾನೆ. ಈ ಅಮವಾಸ್ಯೆಗೆ ಕೆಲ ದಿನಗಳ ಮೊದಲಿಂದ ಹೆಚ್ಚಾಗಿ ಕನಸಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಆತ ನನ್ನ ಸಹಪಾಠಿ, ನನ್ನೊಂದಿಗೆ ಆತ್ಮೀಯವಾಗಿದ್ದ. ಅಂದು ರವಿ ಸಾವಿಗಾಗಿ ಹೋರಾಟ ನಡೆಸಿದ್ದ ಎಚ್‌.ಡಿ.ಕುಮಾರಸ್ವಾಮಿ ಈಗ ಮುಖ್ಯಮಂತ್ರಿಯಾಗಿದ್ದಾರೆ. ರವಿಗೆ ಅನ್ಯಾಯವಾಗಿದ್ದರೆ ಈಗಲಾದರೂ ನ್ಯಾಯ ಕೊಡಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡಬೇಕು. ಈ ಮೂಲಕ ರವಿ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು’’ ಎಂದು ಅವರ ಬಾಲ್ಯದ ಗೆಳೆಯ ಶಿವಲಿಂಗಯ್ಯ ಹೇಳುತ್ತಾರೆ.

ರವಿ ಸೋದರ ಸಂಬಂಧಿ ಗೋವಿಂದಯ್ಯ ಹೇಳುವ ಪ್ರಕಾರ, ಒಂದು ವಾರದಿಂದ ದಿನ ಬಿಟ್ಟು ದಿನ ರವಿ ಅವರ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಾನು ಸರ್ಕಾರಕ್ಕಾಗಿ ಸಾಕಷ್ಟುದುಡಿದೆ. ಆದರೆ ಅವರು ನನಗೆ ಅನ್ಯಾಯ ಮಾಡಿಬಿಟ್ಟರು. ನನ್ನ ಗ್ರಾಮದ ಜನರಿಗೆ ಯಾವುದೇ ಒಳಿತು ಮಾಡಲು ಆಗಲಿಲ್ಲ, ನನಗೆ ನ್ಯಾಯ ಕೊಡಿಸಿ ಎಂದು ರವಿ ಎದುರು ನಿಂತು ರಾತ್ರಿ ಅತ್ತಂತಾಗುತ್ತದಂತೆ. ಆತಂಕದಿಂದ ಕಣ್ಣು ಬಿಟ್ಟರೆ ಯಾರೂ ಇಲ್ಲ, ರವಿ ಮಹಾಲಯ ಅಮವಾಸ್ಯೆ ಹಿನ್ನೆಲೆಯಲ್ಲಿ ಆತ್ಮರೂಪದಲ್ಲಿ ಬಂದಿದ್ದಾನೆ, ನ್ಯಾಯಕ್ಕಾಗಿ ಮನವಿ ಮಾಡುತ್ತಿದ್ದಾನೆ ಎಂಬುದು ಗೋವಿಂದಯ್ಯ ಅವರ ಅಭಿಪ್ರಾಯ.

ತಾಯಿ ಹಿಡಿಶಾಪ:
ಆದರೆ, ಡಿ.ಕೆ.ರವಿ ತಾಯಿ ಮಾತ್ರ ತನಗೆ ಅಂಥ ಯಾವುದೇ ಕನಸು ಬೀಳುತ್ತಿಲ್ಲ, ಕೆಲವರು ಆತ ತಮ್ಮ ಕನಸಲ್ಲಿ ಬಂದಿದ್ದಾನೆ ಎನ್ನುತ್ತಿದ್ದಾರೆ. ರಾತ್ರಿಯಿಡೀ ಜನ ಗ್ರಾಮದಲ್ಲಿ ಓಡಾಡುತ್ತಾರೆ. ಯಾರಿಗೂ ಕಂಡಿಲ್ಲ. ಒಂದು ವೇಳೆ ಅವನು ಕನಸಿನಲ್ಲಿ ಬರುತ್ತಿರುವುದು ಸತ್ಯವೇ ಆಗಿದ್ದರೆ ನಮ್ಮ ಮನೆಹಾಳು ಮಾಡಿದವರ ಮನೆಹಾಳು ಮಾಡಲಿ ಎಂದು ರವಿ ತಾಯಿ ಗೌರಮ್ಮ ಕಣ್ಣೀರು ಹಾಕುತ್ತಾರೆ.

ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿಯನ್ನು ಭೇಟಿ ಮಾಡಬೇಕೆಂದು ಹಲವು ಬಾರಿ ಪ್ರಯತ್ನಿಸಿದೆ. ಅವರ ಬಳಿ ನನ್ನನ್ನು ಕರೆದುಕೊಡು ಹೋಗುವವರು ಯಾರೂ ಇಲ್ಲ, ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿಗಳು ಆರೋಪ ಹೊತ್ತವರ ಪರ ವಕಾಲತ್ತು ವಹಿಸಿದರೂ ಅನುಮಾನವಿಲ್ಲ ಎಂದು ಇದೇ ವೇಳೆ ಗೌರಮ್ಮ ಆಕ್ರೋಶ ಹೊರಹಾಕುತ್ತಾರೆ.

ಸಮಾಧಿಗೆ ಬಂದೋಬಸ್ತ್

ಸಾವಿಗೆ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿ ಅವರ ಸಹೋದರ ಡಿ.ಕೆ. ರಮೇಶ್‌ ಅವರು ರವಿ ಸಮಾಧಿ ಕಿತ್ತು ಅಸ್ತಿಪಂಜರದೊಂದಿಗೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುವುದಾಗಿ ಈ ಹಿಂದೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಮಾಧಿಗೆ ಈಗಲೂ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿದೆ. ಈ ಪ್ರದೇಶದಲ್ಲಿ ಗುಂಡಿತೆಗೆಯುವುದು, ಗುಂಪು ಸೇರುವುದನ್ನು ಸರ್ಕಾರ ನಿಷೇಧಿಸಿದೆ.

ಈ ಸಂಬಂಧ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ರಮೇಶ್‌, ಸಹೋದರನ ಸಾವಿನ ತನಿಖೆ ಮುಗಿಸಿದ ಸಿಬಿಐ ಅಂತಿಮ ವರದಿಯನ್ನು ನಮಗೆ ನೀಡಿಲ್ಲ. ಹಲವು ಬಾರಿ ಆ ದಾಖಲೆಗಳಿಗಾಗಿ ನಾವು ಅಧಿಕಾರಿಗಳನ್ನು ಕೇಳಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಅಂತಿಮ ವರದಿ ನಮ್ಮ ಕೈಸೇರಿದ ನಂತರವಷ್ಟೇ ರವಿ ಸಮಾಧಿ ಬಳಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.


- ಕುಣಿಗಲ್‌ ವಸಂತ್‌ಕುಮಾರ್‌

Follow Us:
Download App:
  • android
  • ios