‘ಮೊದಲನೇ ಮದುವೆಯ ವಿಚ್ಛೇದನ ವಿರುದ್ಧದ ಮೇಲ್ಮನವಿ ಅರ್ಜಿ ಇತ್ಯರ್ಥವು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ, ಹಿಂದೂ ವ್ಯಕ್ತಿಯೊಬ್ಬ ಎರಡನೇ ಮದುವೆಯಾದರೆ ಆ ಮದುವೆ ಊರ್ಜಿತ. ಅದು ಅಸಿಂಧು ಎನ್ನಿಸಿಕೊಳ್ಳದು’ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ನವದೆಹಲಿ : ‘ಮೊದಲನೇ ಮದುವೆಯ ವಿಚ್ಛೇದನ ವಿರುದ್ಧದ ಮೇಲ್ಮನವಿ ಅರ್ಜಿ ಇತ್ಯರ್ಥವು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ, ಹಿಂದೂ ವ್ಯಕ್ತಿಯೊಬ್ಬ ಎರಡನೇ ಮದುವೆಯಾದರೆ ಆ ಮದುವೆ ಊರ್ಜಿತ. ಅದು ಅಸಿಂಧು ಎನ್ನಿಸಿಕೊಳ್ಳದು’ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

‘ವಿಚ್ಛೇದನದ ವಿರುದ್ಧ ನೊಂದ ಪಕ್ಷವು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಬಳಿಕವೇ ಎರಡನೇ ಮದುವೆ ಆಗಬಹುದು ಎಂದು ಹಿಂದು ವಿವಾಹ ಕಾಯ್ದೆಯಲ್ಲಿ ನಮೂದಿಸಲ್ಪಟ್ಟಿದ್ದರೂ, ವಿಚ್ಛೇದನದ ವಿರುದ್ಧ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಎರಡನೇ ಮದುವೆಗೆ ಅಡ್ಡಿಯಾಗಬಾರದು’ ಎಂದು ಅದು ಅಭಿಪ್ರಾಯಪಟ್ಟಿದೆ.

ಹಿಂದು ವಿವಾಹ ಕಾಯ್ದೆಯ ಸೆಕ್ಷನ್‌ 15 ಅನ್ನು ಅರ್ಥೈಸಿರುವ ನ್ಯಾ. ಎಸ್‌.ಎ. ಬೋಬ್ಡೆ ಮತ್ತು ನ್ಯಾ. ಎಲ್‌. ನಾಗೇಶ್ವರ ರಾವ್‌ ಅವರಿದ್ದ ಪೀಠ, ‘ವಿಚ್ಛೇದನದ ವಿರುದ್ಧ ಮೇಲ್ಮನವಿ ಸಲ್ಲಿಸಿದ ಅವಧಿಯಲ್ಲಿ ಎರಡನೇ ಮದುವೆ ಆಗುವುದನ್ನು ತಡೆಯುವುದರಿಂದ ಹಿಂದಿನ ಮದುವೆಯನ್ನು ಉಳಿಸಿಕೊಳ್ಳುವುದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಾಗಿ ಮದುವೆಗೆ ನಿರ್ಬಂಧ ವಿಧಿಸಬಾರದು’ ತಿಳಿಸಿದೆ.

‘ಹಿಂದು ವಿವಾಹ ಕಾಯ್ದೆ ಸೆಕ್ಷನ್‌ 15ರ ಪ್ರಕಾರ, ವಿಚ್ಛೇದನ ತೀರ್ಪಿನ ಬಳಿಕವೇ ವೈವಾಹಿಕ ಜೀವನ ಅಂತ್ಯಗೊಳ್ಳುತ್ತದೆ. ಒಂದು ವೇಳೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರೆ ಅದು ವಜಾಗೊಂಡ ಬಳಿಕವೇ ಗಂಡು ಅಥವಾ ಹೆಣ್ಣು ಮರು ಮದುವೆ ಆಗಬಹುದಾಗಿದೆ’ ಎಂದು ಹೇಳಲಾಗಿತ್ತು. ಈ ಕಾರಣಕ್ಕಾಗಿ 2ನೇ ಮದುವೆಗೆ ತಡೆ ನೀಡಿದ್ದ ದೆಹಲಿ ಹೈಕೋರ್ಟ್‌ ವಿರುದ್ಧ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಈ ಆದೇಶ ಹೊರಡಿಸಿದೆ.