ಬೆಂಗಳೂರು[ಜು.10]: ರಾಜೀನಾಮೆ ನೀಡಿರುವ ಯಾವ ಶಾಸಕರೂ ನನ್ನ ಮಾತು ಕೇಳುವ ಸ್ಥಿತಿಯಲ್ಲಿಲ್ಲ. ನಾನು ಮಾಡಿರುವ ಮನವೊಲಿಕೆ ಯತ್ನಗಳೆಲ್ಲಾ ವಿಫಲವಾಗಿವೆ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಮಂಗಳವಾರ ಸಂಜೆ ಕಾಂಗ್ರೆಸ್‌ ವರಿಷ್ಠರಾದ ಗುಲಾಂ ನಬಿ ಆಜಾದ್‌, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ನಡುವೆ ಶಾಸಕರ ಮನವೊಲಿಕೆ ಸಂಬಂಧ ಸಭೆ ನಡೆಯಿತು.

ಈ ವೇಳೆ ಗುಲಾಂ ನಬಿ ಆಜಾದ್‌ ಅವರು, ನಿಮ್ಮ ಬೆಂಬಲಿಗ ಶಾಸಕರೇ ರಾಜೀನಾಮೆ ಕೊಟ್ಟಿದ್ದಾರೆ. ನೀವು ಹೇಳಿದರೆ ಅವರು ವಾಪಸಾಗುವ ಸಾಧ್ಯತೆಯಿದೆ. ಹೀಗಾಗಿ ಅತೃಪ್ತ ಶಾಸಕರನ್ನು ಮತ್ತೊಮ್ಮೆ ಮನವೊಲಿಸುವ ಪ್ರಯತ್ನ ಮಾಡಿ ಎಂದು ಕೋರಿದರು ಎನ್ನಲಾಗಿದೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದಕ್ಕೆ ಸಿದ್ದರಾಮಯ್ಯ, ನನ್ನ ಮಾತನ್ನು ಯಾರೂ ಕೇಳುತ್ತಿಲ್ಲ. ನನಗೆ ಆಗದವರು ಈ ಶಾಸಕರು ನನಗೆ ತಿಳಿಸಿ ಅನಂತರ ಮುಂಬೈಗೆ ಹೋಗಿದ್ದಾರೆ ಎಂದು ಬಿಂಬಿಸುತ್ತಿದ್ದಾರೆ. ಇದು ಸುಳ್ಳು. ನಾನು ತೀವ್ರ ಪ್ರಯತ್ನ ಪಟ್ಟರೂ ಈ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ. ಸಂಪರ್ಕಕ್ಕೆ ಸಿಕ್ಕವರೂ, ತೀರಾ ಮುಂದೆ ಬಂದು ಬಿಟ್ಟಿದ್ದೇವೆ. ಈಗ ಮರು ಪರಿಶೀಲನೆ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ನಾನಂತೂ ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡಿದ್ದೇನೆ ಎಂದರು ಎನ್ನಲಾಗಿದೆ.

ಬಿಜೆಪಿಯಿಂದ ರಾಜ್ಯಪಾಲರ ದುರ್ಬಳಕೆ:

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುಲಾಂ ನಬಿ ಆಜಾದ್‌, ಬಿಜೆಪಿಯು ದೇಶಾದ್ಯಂತ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದೆ. ಒಂದು ರಾಜ್ಯದ ನಂತರ ಮತ್ತೊಂದು ರಾಜ್ಯವನ್ನು ಅತಂತ್ರಗೊಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ದೂಡುತ್ತಿದೆ. ಕೇಂದ್ರ ಸರ್ಕಾರ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ರಾಜ್ಯಪಾಲರ ನಡೆಯನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದು ಹೇಳಿದರು.

ಬಿಜೆಪಿಯವರು ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ. ರಾಜ್ಯಪಾಲರ ನಡೆಯನ್ನು ಖಂಡಿಸಿ ಬುಧವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಪ್ರಜಾಪ್ರಭುತ್ವಕ್ಕೆ ಬಿಜೆಪಿ ಕೊಡಲಿ ಪೆಟ್ಟು:

ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ಬಿಜೆಪಿ ಕೊಡಲಿ ಪೆಟ್ಟು ಹಾಕುತ್ತಿದೆ. ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ನಮ್ಮ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹಣ ಬಲ ಹಾಗೂ ಕೇಂದ್ರ ಸರ್ಕಾರದ ದುರ್ಬಳಕೆಗೆ ಮುಂದಾಗಿದೆ. ನಮ್ಮ ಶಾಸಕರನ್ನು ಕರೆದುಕೊಂಡು ಹೋಗಲು ಒಬ್ಬೊಬ್ಬರಿಗೆ ಒಂದೊಂದು ವಿಶೇಷ ವಿಮಾನ ಬಳಸುತ್ತಿದ್ದಾರೆ. ಅಷ್ಟುಹಣ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವ ಉಳಿವಿಗಾಗಿ ನಮ್ಮ ಹೋರಾಟ ನಡೆದಿದೆ. ದೇಶಾದ್ಯಂತ ಇದರ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಕರೆ ನೀಡಿದರು.

ನನಗೆ ದಿವ್ಯಜ್ಞಾನ ಇಲ್ಲ

ಬೆಂಗಳೂರಿಗೆ ಶಾಸಕರು ವಾಪಸು ಬರುವುದು ಗೊತ್ತಿಲ್ಲ. ಡಿ.ಕೆ. ಶಿವಕುಮಾರ್‌ ಮುಂಬೈ ಹೋಗುವುದು ಗೊತ್ತಿಲ್ಲ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಿಗೆ ಎಲ್ಲವೂ ಗೊತ್ತಿರಬೇಕು ಅಂತೇನಿಲ್ಲ. ನನಗೆ ಯಾವುದೇ ದಿವ್ಯ ಜ್ಞಾನ ಇಲ್ಲ. ಶಾಸಕರು ವಾಪಸು ಬರುವ ಬಗ್ಗೆಯೂ ನನಗೆ ಮಾಹಿತಿ ಇಲ್ಲ.

- ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ