ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿರುವ ಅನರ್ಹ ಶಾಸಕರಿಗೆ ಶಾಕ್ ಮೇಲೆ ಶಾಕ್ ಎದುರಾಗಿದೆ.
ನವದೆಹಲಿ/ಬೆಂಗಳೂರು, [ಸೆ.17]: ಕಳೆದ ಒಂದೂವರೆ ತಿಂಗಳಿಂದ ವಿಚಾರಣೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ 17 ಅನರ್ಹ ಶಾಸಕರಿಗೆ ಇಂದು ಕೂಡ ಸುಪ್ರೀಂ ಕೋರ್ಟ್ ನಿರಾಸೆ ಮೂಡಿಸಿದೆ.
ಮಂಗಳವಾರ ಬೆಳಗ್ಗೆ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಇದರ ಬೆನ್ನಲ್ಲೇ ರಾಜ್ಯದ ವಿಧಾನಸಭಾ ಕಾರ್ಯಾಲಯ ಅನರ್ಹರಿಗೆ ಮತ್ತೊಂದು ಶಾಕ್ ನೀಡಿದೆ.
ಸ್ಪೀಕರ್ ಅನರ್ಹತೆ ತೀರ್ಪಿನಿಂದ ಹೊಸ ವಿವಾದ
ದೋಸ್ತಿ ಸರ್ಕಾರದ 17 ಶಾಸಕರ ಅನರ್ಹತೆ ಪ್ರಶ್ನಿಸಿ, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅದು ಇಂದು [ಮಂಗಳವಾರ] ಆರಂಭವಾಗಬೇಕಿದ್ದ ವಿಚಾರಣೆಯನ್ನು ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ ಸೋಮವಾರಕ್ಕೆ ಮುಂದೂಡಿದೆ.
ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾ. ಶಾಂತನಗೌಡರ್ ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದರು. ಅನರ್ಹ ಶಾಸಕ ಬಿ.ಸಿ. ಪಾಟೀಲ್ ಮತ್ತು ನ್ಯಾ.ಶಾಂತನಗೌಡರ್ ಒಂದೇ ಜಿಲ್ಲೆಯವರಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದಿದ್ದಾರೆ.
ಇದರ ಬೆನ್ನಲ್ಲೇ ಕೊನೆಯ ವಾರವಷ್ಟೇ ಪತ್ರ ಬರೆದಿದ್ದ ವಿಧಾನಸಭಾ ಕಾರ್ಯಾಲಯ ಇದೀಗ ಮತ್ತೊಂದು ಪತ್ರವನ್ನು ರಾಜ್ಯಪಾಲರು ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿದೆ.
ಜುಲೈ 25ಕ್ಕೆ ಶಾಸಕರು ಅನರ್ಹಗೊಂಡಿದ್ದು, ಜನವರಿ 25ರ ಒಳಗೆ ಆ ಸ್ಥಾನಗಳನ್ನು ತುಂಬಬೇಕು. ಹೀಗಾಗಿ ಚುನಾವಣಾ ನೋಟಿಫಿಕೇಷನ್ ಹೊರಡಿಸುವಂತೆ ಸಲಹಾ ಪತ್ರ ನೀಡಿದೆ.
ವಿಧಾನಸಭಾ ಕಾರ್ಯಾಲಯದ ಪತ್ರವನ್ನ ಆಯೋಗ ಪರಿಗಣಿಸಿದ್ರೆ, 1 ತಿಂಗಳಲ್ಲೇ 17 ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ. ಇದರಿಂದ ಅನರ್ಹ ಶಾಸಕರ ಎದೆ ಬಡಿತ ಹೆಚ್ಚಾಗಿದೆ.
