ಬೆಂಗಳೂರು[ಆ.05]: ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಯಿಂದ ಬೇಸತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅತೃಪ್ತ ಶಾಸಕರ ಗುಂಪು ಸೇರಿದ್ದ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ. ಯಾವ ಸಿದ್ದರಾಮಯ್ಯಗಾಗಿ ನಾನು ಕಾಂಗ್ರೆಸ್ ಬಿಟ್ಟೆನೋ ಅದೇ ಸಿದ್ದರಾಮಯ್ಯ ಜೆಡಿಎಸ್‌ನಲ್ಲೂ ಕಿರುಕುಳ ಕೊಟ್ಟರು ಎಂದು ಆರೋಪಿಸಿದ್ದಾರೆ. ಈ ಮೂಲಕ ಅತೃಪ್ತ ಶಾಸಕರ ಗುಂಪು ಸೇರಲು ಸಿದ್ದರಾಮಯ್ಯರಿಂದಾದ ಅವಮಾನವೂ ಒಂದು ಕಾರಣ ಎಂದು ವಿಶ್ವನಾಥ್ ಆರೋಪಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ನನಗೆ ತಾಯಿ ಸಮಾನ. ಹೀಗಾಗಿ, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಕೆ.ಆರ್.ನಗರಕ್ಕೆ ಬಂದಾಗ ಅವರನ್ನು ಭೇಟಿಯಾಗಲು ಇಚ್ಛಿಸಿದ್ದೆ. ಆದರೆ, ಅಲ್ಲಿ ಸಿದ್ದರಾಮಯ್ಯ ಇರುತ್ತಾರೆ ಹೋಗೋದು ಬೇಡ ಎಂದು ಹೇಳಲಾಯಿತು. ಸಮನ್ವಯ ಸಮಿತಿ, ಮೈತ್ರಿ ಸರ್ಕಾರದ ಸಭೆಗಳಲ್ಲೂ ಸಿದ್ದರಾಮಯ್ಯ ಇರುತ್ತಾರೆ ಬರುವುದು ಬೇಡ ಅಂದರು. ಸಮನ್ವಯ ಸಮಿತಿಗೆ ವಿಶ್ವನಾಥ್ ಬರಲಿ ಎನ್ನುವ ಕನಿಷ್ಠ ಸೌಜನ್ಯವನ್ನು ಸಿದ್ದರಾಮಯ್ಯ ತೋರಿಲ್ಲ. ಅವರು ನನ್ನನ್ನು ಜೆಡಿಎಸ್‌ನಲ್ಲೂ ನೆಮ್ಮ ದಿಯಾಗಿರಲು ಬಿಡಲಿಲ್ಲ. ಪಕ್ಷದ ರಾಜ್ಯಾಧ್ಯಕ್ಷನಾಗಿ ದ್ದುಕೊಂಡು ಯಾಕೆ ನನಗೆ ಈ ಸ್ಥಿತಿ ಬಂತು ಎಂದು ಜೆಡಿಎಸ್ ವರಿಷ್ಠರನ್ನು ಅವರು ಪ್ರಶ್ನಿಸಿದರು.

ಲೋಕಸಭಾ ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು, ರಾಜ್ಯದ ಸೋಲಿನ ಹೊಣೆ ಹೊತ್ತು ನಾನು ರಾಜೀನಾಮೆ ನೀಡಿದೆ, ಆದರೆ ನೀವು ಯಾವಾಗ ರಾಜೀನಾಮೆ ಕೊಡುತ್ತೀರಿ? ನೀವಿನ್ನೂ ಗೂಟಾ ಹೊಡೆದುಕೊಂಡು ಕೂತಿದ್ದೀರಾ? ನಾಡಿನ ಜನ ನಿಮ್ಮನ್ನು ಹೀನಾಯವಾಗಿ ಸೋಲಿಸಿದರು, ನಿಮ್ಮನ್ನು ಉಪ ಮುಖ್ಯಮಂತ್ರಿ ಮಾಡಿದವರನ್ನೇ ನೀವು ತುಮಕೂರಿನಲ್ಲಿ ಅವರೆಗೆ ಖೆಡ್ಡಾ ತೋಡಿದಿರಿ ಎಂದು ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಆಕ್ರೋಶ ಹೊರಹಾಕಿದರು

ಅತೃಪ್ತರು ಕಾರಣರಲ್ಲ:

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಕ್ಕೂ ಮತ್ತೊಂದು ಸರ್ಕಾರ ರಚನೆಗೂ ೨೦ ಶಾಸಕರು ಕಾರಣರಲ್ಲ, ಹೊಸದಾಗಿ ಬಂದಿರುವ ಬಿಜೆಪಿ ಸರ್ಕಾರವೂ ಕಾರಣವಲ್ಲ, ಪಾಲುದಾರ ಪಕ್ಷಗಳ ನಾಯಕರೇ ನೇರ ಹೊಣೆ. ಅವರು ನಾಯಕರ ಬದಲು ಮಾಲಕರಂತೆ ವರ್ತಿಸಿದರು ಎಂದು ವಿಶ್ವನಾಥ್ ನೇರ ಆರೋಪ ಮಾಡಿದರು.

ದೇವೇಗೌಡರಲ್ಲಿ ಕ್ಷಮೆ:

ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರವಾಗಿ ಈಗಾಗಲೇ ಹುಣಸೂರು ಕ್ಷೇತ್ರದ ಮತದಾರರು, ಸಾರ್ವಜನಿಕರಲ್ಲಿ ಕ್ಷಮೆ ಕೋರಿದ್ದೇನೆ. ಅಲ್ಲದೆ, ಖುದ್ದು ಕ್ಷೇತ್ರಕ್ಕೆ ಭೇಟಿ ನೀಡಿ, ಜನರನ್ನು ಮಾತನಾಡಿಸುತ್ತೇನೆ. ದೇವೇಗೌಡರಲ್ಲೂ ಕ್ಷಮೆ ಕೋರುತ್ತೇನೆ. ಸ್ಮರಣೀಯರಾಗಿರುವ ಅವರ ಫೋಟೋವನ್ನು ಮನೆಯಲ್ಲಿ ಇರಿಸಿ ಪೂಜಿಸುತ್ತೇನೆ ಎಂದರು.

ಸಾ.ರಾ.ಅಪ್ರಬುದ್ಧ:

ಸಾ.ರಾ.ಮಹೇಶ್ ವಿರುದ್ಧವೂ ಕಿಡಿಕಾರಿರುವ ವಿಶ್ವನಾಥ್, ಅವರೊಬ್ಬ ಅಪ್ರಬುದ್ಧ ಮಂತ್ರಿಯಾಗಿದ್ದರು. ದೇವೇಗೌಡರ ಕುಟುಂಬಕ್ಕೆ ವಿಷ ಉಣಿಸಿದ ಕೀರ್ತಿ ಪುರುಷ ಅವರು. ಎಲ್ಲರ ಮೇಲೆ ಸಾ.ರಾ. ಮಹೇಶ್ ಚಾಡಿ ಹೇಳಿದ್ದು, ಅವರ ಮಾತನ್ನು ಮುಖ್ಯಮಂತ್ರಿಯಾಗಿದ್ದವರು ಕೇಳಿದ್ದಾರೆ. ದುಡ್ಡಿಗಾಗಿ ಹೋಗಿದ್ದಾರೆ ಎಂದು ಸಾ.ರಾ.ಮಹೇಶ್ ನಮ್ಮ ಬಗ್ಗೆ ಆರೋಪಿಸಿದ್ದಾರೆ. ಆದರೆ ಮೂವರು ಸಚಿವರು, 17 ಶಾಸಕರು ಸೇರಿದಂತೆ 20 ಮಂದಿಯೂ ದುಡ್ಡಿನ ಕುಳಗಳೇ. ಎಲ್ಲರೂ ಅವಮಾನದಿಂದ ಹೊರಗೆ ಬಂದರೇ ಹೊರತು ಅಧಿಕಾರಕ್ಕಾಗಿಯಲ್ಲ ಎಂದು ವಿಶ್ವನಾಥ್ ತಿರುಗೇಟು ನೀಡಿದರು