ನವದೆಹಲಿ [ಜು.26]: ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡ ಶಾಸಕರು ಸದರಿ ವಿಧಾನಸಭೆಯ ಅವಧಿ ಮುಗಿಯುವವರೆಗೆ ಚುನಾವಣೆ ಸ್ಪರ್ಧಿಸುವಂತಿಲ್ಲ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಗುರುವಾರ ನೀಡಿದ ತೀರ್ಪು ತೀವ್ರ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಓಂ ಪ್ರಕಾರ್‌ ರಾವತ್‌ 2018ರಲ್ಲಿ ನೀಡಿದ್ದ ತದ್ವಿರುದ್ಧ ಹೇಳಿಕೆಯೊಂದು ಇದೀಗ ಮುನ್ನೆಲೆಗೆ ಬಂದಿದೆ.

‘ಸಂವಿಧಾನದ 10ನೇ ಶೆಡ್ಯೂಲ್‌ ಪ್ರಕಾರ ಶಾಸಕರನ್ನು ಅನರ್ಹಗೊಳಿಸಿದರೆ, ಅದು ವಿಧಾನಸಭೆಯಲ್ಲಿ ಅವರ ಸದಸ್ಯತ್ವಕ್ಕಷ್ಟೇ ಸಂಬಂಧಿಸಿರುತ್ತದೆ. ಅದಾದ ಬಳಿಕ ಬರುವ ಯಾವುದೇ ಚುನಾವಣೆಯಲ್ಲಿ ಅನರ್ಹಗೊಂಡ ಶಾಸಕರು ಸ್ಪರ್ಧಿಸುವುದನ್ನು ನಿರ್ಬಂಧಿಸುವುದಿಲ್ಲ’ ಎಂದು ರಾವತ್‌ ಆಗ ಹೇಳಿದ್ದರು. ಈ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಿ ಪುನರಾಯ್ಕೆಯಾಗಲು ಯಾವುದೇ ಅಡ್ಡಿಯಿಲ್ಲ ಎಂಬಂಥ ಮಾತನ್ನಾಡಿದ್ದರು. ಇದು ಸರಿಯೇ ಆಗಿದ್ದಲ್ಲಿ, ಇದೀಗ ಸ್ಪೀಕರ್‌ ತೀರ್ಪಿನಂತೆ ಅನರ್ಹಗೊಂಡ ಆರ್‌.ಶಂಕರ್‌, ರಮೇಶ್‌ ಜಾರಕಿಹೊಳಿ ಹಾಗೂ ಮಹೇಶ್‌ ಕುಮಟಳ್ಳಿ ಅವರುಗಳು ಉಪಚುನಾವಣೆ ಸ್ಪರ್ಧಿಸಲು ಯಾವುದೇ ಅಡ್ಡಿ ಉಂಟಾಗಲಾರದು.

ತಮಿಳ್ನಾಡಲ್ಲೇನಾಗಿತ್ತು?: 2018ರಲ್ಲಿ ಎಐಎಡಿಎಂಕೆ ಸರ್ಕಾರದ ವಿರುದ್ಧ ಬಂಡೆದ್ದು ಎಎಂಎಂಕೆ ಪಕ್ಷದ ಸಂಸ್ಥಾಪಕ ಟಿ.ಟಿ.ವಿ.ದಿನಕರನ್‌ ಪರ ವಾಲಿದ್ದ ತಮಿಳುನಾಡಿನ 18 ಶಾಸಕರನ್ನು ಅಲ್ಲಿನ ವಿಧಾನಸಭಾ ಸ್ಪೀಕರ್‌ ಅನರ್ಹಗೊಳಿಸಿದ್ದರು. ಇದನ್ನು ಮದ್ರಾಸ್‌ ಹೈಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು. ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ್ದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾವತ್‌, ಅನರ್ಹಗೊಂಡವರು ಉಪಚುನಾವಣೆ ಸ್ಪರ್ಧಿಸಲು ಅಡ್ಡಿಯಿಲ್ಲ ಎಂಬರ್ಥದ ವಿವರಣೆ ನೀಡಿದ್ದರು.