ಸೀತಾ ಮಾತೆಯ ತವರಿನಿಂದ ಶ್ರೀ ರಾಮನ ಹುಟ್ಟೂರಿಗೆ ನೇರ ಬಸ್ ಸೇವೆ

Direct bus service from Janakpur to Ayodhya
Highlights

ಸೀತಾಮಾತೆಯ ತವರೂರಾದ ನೇಪಾಳದ ಜನಕಪುರದಿಂದ ರಾಮನ ಹುಟ್ಟೂರಾದ ಅಯೋಧ್ಯೆಯವರೆಗೆ ನೇರ ಬಸ್ ಸೇವೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು ಉದ್ಘಾಟಿಸಿದರು. ‘ರಾಮಾಯಣ ಸರ್ಕೀಟ್’ ಮಹತ್ವಾಕಾಂಕ್ಷಿ ಯೋಜನೆಯ ಅಡಿ ಈ ಸೇವೆಯನ್ನು ಲೋಕಾರ್ಪಣೆ ಮಾಡಲಾಗಿದೆ. 

ಜನಕಪುರ: ಸೀತಾಮಾತೆಯ ತವರೂರಾದ ನೇಪಾಳದ ಜನಕಪುರದಿಂದ ರಾಮನ ಹುಟ್ಟೂರಾದ ಅಯೋಧ್ಯೆಯವರೆಗೆ ನೇರ ಬಸ್ ಸೇವೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು ಉದ್ಘಾಟಿಸಿದರು. ‘ರಾಮಾಯಣ ಸರ್ಕೀಟ್’ ಮಹತ್ವಾಕಾಂಕ್ಷಿ ಯೋಜನೆಯ ಅಡಿ ಈ ಸೇವೆಯನ್ನು ಲೋಕಾರ್ಪಣೆ ಮಾಡಲಾಗಿದೆ. 

‘ಈ ಎರಡೂ ಪವಿತ್ರ ಊರುಗಳನ್ನು ಸಂಪರ್ಕಿಸಲಾಗಿದೆ. ಇದೊಂದು ಐತಿಹಾಸಿಕ ಕ್ಷಣ’ ಎಂದು ಮೋದಿ ಈ ಸಂದರ್ಭದಲ್ಲಿ  ಬಣ್ಣಿಸಿದರು. ಐತಿಹಾಸಿಕ ಜಾನಕಿ ದೇವಾಲಯಕ್ಕೆ ಭೇಟಿ ನೀಡಿ ಷೋಡಶೋಪಚಾರ ಪೂಜೆ ನೆರವೇರಿಸಿದರು. ಬಳಿಕ ಬಸ್ ಸೇವೆಯನ್ನು ಅವರು ಲೋಕಾರ್ಪಣೆ  ಮಾಡಿದರು. ಇಲ್ಲಿಗೆ ಬಂದ ಮೊದಲ ಭಾರತದ ಪ್ರಧಾನಿ ಮೋದಿ ಆಗಿದ್ದಾರೆ.

ನೇಪಾಳ ಮತ್ತು ಭಾರತದಲ್ಲಿ ರಾಮಾಯಣ ದಲ್ಲಿನ ಐತಿಹಾಸಿಕ ಸ್ಥಳಗಳನ್ನು ಜೋಡಿಸುವ ಪ್ರವಾಸೋದ್ಯಮ ಯೋಜನೆಯೇ ‘ರಾಮಾಯಣ  ಸರ್ಕೀಟ್’. ಇದರನ್ವಯ ಜನಕಪುರ (ನೇಪಾಳ), ಅಯೋಧ್ಯೆ, ನಂದಿಗ್ರಾಮ, ಶೃಂಗವೇರ್‌ಪುರ ಮತ್ತು ಚಿತ್ರಕೂಟ (ಉತ್ತರಪ್ರದೇಶ), ಸೀತಾಮಢಿ, ದರ್ಭಂಗಾ ಮತ್ತು ಬಕ್ಸರ್ (ಬಿಹಾರ), ಚಿತ್ರಕೂಟ (ಮಧ್ಯಪ್ರದೇಶ), ಮಹೇಂದ್ರಗಿರಿ (ಒಡಿಶಾ), ಜಗದಲ್‌ಪುರ (ಛತ್ತೀಸ್‌ಗಢ), ನಾಸಿಕ್ ಮತ್ತು ನಾಗಪುರ (ಮಹಾರಾಷ್ಟ್ರ), ಭದ್ರಾಚಲಂ (ತೆಲಂಗಾಣ), ಹಂಪಿ (ಕರ್ನಾಟಕ) ಹಾಗೂ  ರಾಮೇಶ್ವರಂ (ತಮಿಳುನಾಡು)- ಈ 15 ಊರುಗಳು ಯೋಜನೆಯಲ್ಲಿವೆ. 

ಜಾನಕಿ ದೇವಾಲಯಕ್ಕೆ ಭೇಟಿ ನೀಡಿದ ಮೋದಿ ಅವರನ್ನು ನೇಪಾಳ ಪ್ರಧಾನಿ ಓಲಿ ಸ್ವಾಗತಿಸಿದರು ಹಾಗೂ ಮೋದಿ ಅವರ ಭೇಟಿಯನ್ನು ಪ್ರಶಂಸಿಸಿದರು. ಮೋದಿ ಮಾತನಾಡಿ, ‘ಜನಕರಾಜ  ಹಾಗೂ ಸೀತಾಮಾತೆಯ ತವರೂರಾದ ಜನಕಪುರಿಗೆ ಬಂದಿದ್ದಕ್ಕೆ ತುಂಬಾ  ಸಂತಸವಾಗಿದ್ದು, ಜನಕರಾಜ/ ಸೀತೆಗೆ ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ’ ಎಂದರು. ಮೋದಿ ಅವರನ್ನು ನೋಡಲು ಸಾವಿರಾರು ಜನರು ದೇವಾಲಯಕ್ಕೆ ದೌಡಾಯಿಸಿದ್ದರು. ಜನಕಪುರಿಯು ಸೀತಾಮಾತೆಯ ಜನ್ಮಸ್ಥಳ. ಸೀತೆಯ ಸ್ಮರಣೆಗಾಗಿ 1910ರಲ್ಲಿ ಜಾನಕಿ ದೇವಾಲಯ ನಿರ್ಮಿಸಲಾಗಿತ್ತು.

loader