ದಿನೇಶ್ ಗುಂಡೂರಾವ್ ಗೆ ಮತ್ತೊಂದು ಮಹತ್ವದ ಹುದ್ದೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Aug 2018, 9:14 AM IST
Dinesh gundurao is likely to join coordination committee
Highlights

ಕೆಪಿಸಿಸಿ ನೂತನ ಅಧ್ಯಕ್ಷರಾಗಿರುವ  ದಿನೇಶ್ ಗುಂಡೂರಾವ್ ಅವರಿಗೆ ಇದೀಗ ಮತ್ತೊಂದು ಹುದ್ದೆ ದೊರೆಯುವ ಸಾಧ್ಯತೆ  ಇದೆ. ಸರ್ಕಾರದ ಸಮ್ವಯ ಸಮಿತಿಯಲ್ಲಿ  ಸ್ಥಾನ ದೊರೆಯಬಹುದಾಗಿದೆ. 

ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಪ್ರಮುಖ ನಿರ್ಣಯಗಳನ್ನು ನಿರ್ಧರಿಸುವ ಸಮನ್ವಯ ಸಮಿತಿ ಹಿಗ್ಗುವ ಸಾಧ್ಯತೆಯಿದೆ. ಭಾನುವಾರವಷ್ಟೇ ಜೆಡಿಎಸ್‌ನ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಎಚ್.ವಿಶ್ವನಾಥ್ ಹಾಗೂ ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಅವರಿಬ್ಬರನ್ನೂ ಸಮನ್ವಯ ಸಮಿತಿ ಸದಸ್ಯರನ್ನಾಗಿ ನೇಮಿಸುವ ನಿರೀಕ್ಷೆಯಿದೆ.

ಹಾಗಾದಲ್ಲಿ ಸಮನ್ವಯ ಸಮಿತಿ ಸದಸ್ಯರ ಸಂಖ್ಯೆ ಏಳಕ್ಕೆ ಹೆಚ್ಚಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಮಿತಿಯಲ್ಲಿ ಸದ್ಯಕ್ಕೆ ಕಾಂಗ್ರೆಸ್ ಕಡೆಯಿಂದ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿದ್ದಾರೆ. ಜೆಡಿಎಸ್ ನಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡಾನಿಷ್ ಅಲಿ ಇದ್ದಾರೆ. 

ಕುಮಾರಸ್ವಾಮಿ ಮತ್ತು ಪರಮೇಶ್ವರ್ ಅವರಿಬ್ಬರೂ ಆಯಾ ಪಕ್ಷಗಳ ರಾಜ್ಯಾಧ್ಯಕ್ಷ ಹುದ್ದೆಯನ್ನೂ ಅಲಂಕರಿಸಿದ್ದರಿಂದ ಸಮಿತಿ ಸಂಖ್ಯೆ ಹೆಚ್ಚಿಸುವ ಅಗತ್ಯ ಕಂಡುಬಂದಿರಲಿಲ್ಲ. ಇದೀಗ ಉಭಯ ಪಕ್ಷಗಳಿಗೂ ಹೊಸ ರಾಜ್ಯಾಧ್ಯಕ್ಷರು ನೇಮಕಗೊಂಡಿರುವುದರಿಂದ ಇಬ್ಬರನ್ನೂ ಸಮನ್ವಯ ಸಮಿತಿ ಸದಸ್ಯರನ್ನಾಗಿ ಮಾಡುವ ಸಂಭವವಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ವಿಶ್ವನಾಥ್ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರ ಬದ್ಧ ರಾಜಕೀಯ ವಿರೋಧಿಯಾಗಿರುವುದರಿಂದ ಈ ಸಮಿತಿ ಸಭೆ ರಂಗು ಪಡೆದುಕೊಳ್ಳಲಿದೆ ಎನ್ನಲಾಗಿದೆ.

loader