ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪೇಚಿಗೆ ಸಿಲುಕಿದ ಪ್ರಸಂಗ ಜರುಗಿತು.
ಬೆಂಗಳೂರು :ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಎರಡು ದಿನಗಳ ಬೆಂಗಳೂರು ಮಹಾನಗರ ವಿಪ್ರರ ಬೃಹತ್ ಸಮಾವೇಶ ನಡೆಯಿತು.
ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪೇಚಿಗೆ ಸಿಲುಕಿದ ಪ್ರಸಂಗ ಜರುಗಿತು. ಕಾಂಗ್ರೆಸ್ ಪಕ್ಷವು ಕಳೆದ ಬಾರಿಯ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ. ಸಿದ್ದರಾಮಯ್ಯ ಅವರ ಸರ್ಕಾರ ನುಡಿದಂತೆ ನಡೆದಿದೆ ಎಂದು ಹೇಳುತ್ತಿದ್ದಂತೆ ಸಮಾವೇಶದಲ್ಲಿ ನೆರೆದಿದ್ದವರೆಲ್ಲರೂ ಇಲ್ಲ.... ಇಲ್ಲ... ಇಲ್ಲಿ ರಾಜಕೀಯ ಬೇಡ ಎಂದು ತೀವ್ರವಾಗಿ ಖಂಡಿಸಿದರು.
ಕೆಲ ನಿಮಿಷ ಕುಳಿತಿದ್ದವರು ಎದ್ದು ನಿಂತು ಕೂಗಾಡಿದರು. ಬಳಿಕ ಸಮಾಜದ ಅಧ್ಯಕ್ಷರು, ಅತಿಥಿಗಳಿಗೆ ಗೌರವ ನೀಡೋಣ ಹೀಗೆ ಮಾಡಬೇಡಿ ಎಂದು ಮನವಿ ಮಾಡಿದ್ದರಿಂದ ಕೂಗಾಟ ತಿಳಿಯಾಯಿತು.
ಮತ್ತೆ ಮಾತಿಗಿಳಿದ ದಿನೇಶ್ ಗುಂಡೂರಾವ್, ನನ್ನ ಮಾತಿನಿಂದ ಯಾರಿಗಾದರೂ ಬೇಜಾರಾಗಿದ್ದರೆ ಕ್ಷಮಿಸಿ ಎಂದು ಹೇಳಿ ಕುಳಿತರು.

Last Updated 11, Apr 2018, 12:57 PM IST