ಉಡುಪಿ :  ಪೇಜಾವರ ಮಠದ ವಿಶ್ವೇಶತೀರ್ಥರು ರಾಮಮಂದಿರ ಕಟ್ಟುವುದಾಗಿಯೂ ಹೇಳಲಿ ಅಥವಾ ಸಂವಿಧಾನವನ್ನು ಬದಲಾಯಿಸುವ ಬಗ್ಗೆಯಾದರೂ ಹೇಳಲಿ. ಅವರಿಗೆ ಅರಳು-ಮರಳಾಗಿದ್ದು, ಅವರ ಹೇಳಿಕೆಗಳನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳಬೇಕಾದ್ದಿಲ್ಲ ಎಂದು ಚಿಂತಕ ದಿನೇಶ್‌ ಅಮೀನ್‌ ಮಟ್ಟು ಹೇಳಿದ್ದಾರೆ.

ಭಾನುವಾರ ಉಡುಪಿಯಲ್ಲಿ ಅಂಬೇಡ್ಕರ್‌ ಯುವಜನೋತ್ಸವ ಉದ್ಘಾಟಿಸಿದ ಅವರು, ವಯಸ್ಸಾದವರು ಒಂದೊಂದು ಸಲ ಒಂದೊಂದು ಮಾತನಾಡುತ್ತಾರೆ. ಪೇಜಾವರ ಶ್ರೀಗಳಿಗೂ ವಯಸ್ಸಾಗಿದೆ. 

ಆದ್ದರಿಂದ ಅವರು ಏನು ಹೇಳಿದರೂ ಅವರನ್ನು ಕ್ಷಮಿಸಿಬಿಡೋಣ ಎಂದರು. ಹಿಂದೆ ಉಡುಪಿ ಚಲೋ ಮಾಡಿದಾಗ ಪೇಜಾವರ ಶ್ರೀಗಳ ಕೆಲವು ಶಿಷ್ಯರು ಉಡುಪಿ ಅಶುದ್ಧಿಯಾಗಿದೆ. ಆದ್ದರಿಂದ ಉಡುಪಿಯನ್ನೇ ಶುದ್ಧಿ ಮಾಡುತ್ತೇವೆ ಎಂದು ಹೊರಟಿದ್ದರು. ಪೇಜಾವರರು ಅಂತಹವರಿಗೆಲ್ಲಾ ಗುರುಗಳಾಗಿದ್ದಾರೆ ಎಂದು ಟೀಕಿಸಿದರು.

ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವರೊಬ್ಬರು ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ. ಅದಕ್ಕೆ ತಕ್ಕ ವೇದಿಕೆಯಲ್ಲಿ ತಕ್ಕ ಉತ್ತರವನ್ನು ನೀವು ನೀಡಬೇಕು ಎಂದು ಸ್ಥಳದಲ್ಲಿದ್ದವರಿಗೆ ಹೇಳಿದರು.