ಪ್ರತ್ಯೇಕ ಧರ್ಮ ರಚನೆ ಕುರಿತಂತೆ ವೀರಶೈವ ಮತ್ತು ಲಿಂಗಾಯತ ಪಂಗಡಗಳಲ್ಲಿ  ಒಡಕು ಮೂಡಿದ ನಂತರ ಇದೇ ಮೊದಲ ಬಾರಿಗೆ ಪಂಚ ಪೀಠಾಧಿಪತಿಗಳು ಬುಧವಾರದಿಂದ ಬಹಿರಂಗವಾಗಿ ಅಖಾಡಕ್ಕೆ ಇಳಿಯಲಿದ್ದಾರೆ.

ಬೆಂಗಳೂರು (ಆ.22):ಪ್ರತ್ಯೇಕ ಧರ್ಮ ರಚನೆ ಕುರಿತಂತೆ ವೀರಶೈವ ಮತ್ತು ಲಿಂಗಾಯತ ಪಂಗಡಗಳಲ್ಲಿ ಒಡಕು ಮೂಡಿದ ನಂತರ ಇದೇ ಮೊದಲ ಬಾರಿಗೆ ಪಂಚ ಪೀಠಾಧಿಪತಿಗಳು ಬುಧವಾರದಿಂದ ಬಹಿರಂಗವಾಗಿ ಅಖಾಡಕ್ಕೆ ಇಳಿಯಲಿದ್ದಾರೆ.

ಬೆಳಗಾವಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಒತ್ತಾಯಿಸಿ ಶಕ್ತಿ ಪ್ರದರ್ಶನಗೊಂಡ ಬೆನ್ನಲ್ಲೇ ಈಗ ವೀರಶೈವ ಪಂಚಪೀಠಾಧಿಪತಿಗಳು ಬುಧವಾರ ಬೆಂಗಳೂರಿನಲ್ಲಿ ಸುಮಾರು ೪೦೦ ಮಠಾಧೀಶರ ಸಭೆ ಕರೆಯುವ ಮೂಲಕ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಮಹತ್ವದ ಸಭೆ ನಡೆಸಲಿದ್ದಾರೆ. ಅದಾದ ಬಳಿಕ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ.


ವಿಜಯನಗರದ ಟೆಲಿಫೋನ್ ಎಕ್ಸ್‌ಚೇಂಜ್ ಬಳಿ ಇರುವ ಜಗಜ್ಯೋತಿ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಾಳೆ ಬೆಳಗ್ಗೆ 11 ಕ್ಕೆ ಸಭೆ ನಡೆಯಲಿದ್ದು, ರಂಭಾಪುರ, ಉಜ್ಜಯಿನಿ, ಕೇದಾರ, ಕಾಶಿ ಮತ್ತು ಶ್ರೀಶೈಲ ಪೀಠಗಳ ಪೀಠಾಧೀಶರು ಹಾಗೂ ರಾಜ್ಯದ ಸುಮಾರು 400 ಗುರು-ವಿರಕ್ತರು ಪಾಲ್ಗೊಳ್ಳುವರು. ಸಭೆ ಬಳಿಕ ಮಧ್ಯಾಹ್ನ 2 ಗಂಟೆಗೆ ವಿಜಯನಗರ ವಿವಿಧ ಬಡಾವಣೆಗಳಲ್ಲಿ ಪಾದಯಾತ್ರೆ ನಡೆಯಲಿದೆ. ಅದಾದ ಬಳಿಕ ರಾತ್ರಿ 8 ಕ್ಕೆ ಪಂಚ ಪೀಠಾಧೀಶರು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸಭೆಯ ತೀರ್ಮಾನಗಳನ್ನು ಒಳಗೊಂಡ ಮನವಿ ಸಲ್ಲಿಸುವರು.

ಈಗಾಗಲೇ ಇಳಕಲ್ಲ ಮಹಾಂತ ಸ್ವಾಮೀಜಿ, ಗದುಗಿನ ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ ಹಾಗೂ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ನೇತೃತ್ವದಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಬಸವರಾಜ ರಾಯರೆಡ್ಡಿ, ವಿನಯ್ ಕುಲಕರ್ಣಿ, ಡಾ.ಶರಣಪ್ರಕಾಶ್ ಪಾಟೀಲ್, ಶಾಸಕ ಬಸವರಾಜ ಹೊರಟ್ಟಿ ಮತ್ತಿತರರು ಬೆಂಗಳೂರಿನಲ್ಲಿ ಸಭೆ ನಡೆಸಿದ ಬಳಿಕ ಮಂಗಳವಾರವಷ್ಟೇ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಜನಜಾಗೃತಿಗೆ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಸಿದ್ದಾರೆ. ಇದರ ಬೆನ್ನಲ್ಲೇ ಪಂಚಪೀಠಾಧೀಶರು ಬೆಂಗಳೂರಿನಲ್ಲಿ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಸಭೆ ಕರೆದಿರುವುದು ಭಾರಿ ಕುತೂಹಲ ಕೆರಳಿಸಿದೆ. ಪಂಚ ಪೀಠಾಧೀಶರ ಈ ಪ್ರಯತ್ನಕ್ಕೆ ವೀರಶೈವ ಮಹಾಸಭಾ ಬೆಂಬಲ ನೀಡಿರುವುದು ಮತ್ತಷ್ಟು ಒಡಕಿಗೆ ಕಾರಣವಾಗಿದೆ. ಸಚಿವ ಸಂಪುಟ ಐವರು ಲಿಂಗಾಯತ ಸಚಿವರ ಪೈಕಿ ನಾಲ್ವರು ಲಿಂಗಾಯತ ಧರ್ಮದ ಪರವಾಗಿದ್ದರೆ, ವೀರಶೈವ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿಯೂ ಆದ ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಪಂಚ ಪೀಠಾಧೀಶರ ಹಿಂದೆ ನಿಂತಿದ್ದಾರೆ. ಮುಂದಿನ ದಿನಗಳಲ್ಲಿ ಉಭಯ ಬಣಗಳ ನಡುವೆ ಪ್ರತ್ಯೇಕ ಧರ್ಮಕ್ಕಾಗಿ ಇನ್ನಷ್ಟು ಚಟುವಟಿಕೆ ಬಿರುಸುಗೊಳ್ಳುವ ಸಾಧ್ಯತೆಗಳಿವೆ.