ಪ್ರಖ್ಯಾತ ಪೋರ್ಚುಗಲ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಕೇರಳ ನೆರೆ ಸಂತ್ರಸ್ತರಿಗಾಗಿ 77 ಕೋಟಿ ರು. ದೇಣಿಗೆ ನೀಡಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸದ್ಯ ಈ ಸಂದೇಶ ವೈರಲ್ ಆಗುತ್ತಿದೆ.

ಅಲ್ಲದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಕೇರಳ ಸರ್ಕಾರಗಳು ನೀಡಿರುವ ತುರ್ತುನಿಧಿಗೆ ಹೋಲಿಸಿ ಟೀಕೆ ಮಾಡಲಾಗುತ್ತಿದೆ. ಷಿಯಲ್ ಮೀಡಿಯಾದಲ್ಲಿ ರೊನಾಲ್ಡೋ ಅವರ ಫೋಟೋವನ್ನು ಪೋಸ್ಟ್ ಮಾಡಿ, ‘ರೊನಾಲ್ಡೋರನ್ನು ಜನ ಯಾಕೆ ಇಷ್ಟಪಡುತ್ತಾರೆ ಎಂಬುದಕ್ಕೆ ಉತ್ತರ ಇಲ್ಲಿದೆ. ಕೇರಳ ಪ್ರವಾಹ ಸಂತ್ರಸ್ತರಿಗೆ ರೊನಾಲ್ಡೋ 77 ಕೋಟಿ ನೀಡಿದ್ದಾರೆ’ ಎಂದು ಒಕ್ಕಣೆ ಬರೆದಿದ್ದಾರೆ.

ಆದರೆ ನಿಜಕ್ಕೂ ಪೋರ್ಚುಗಲ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಕೇರಳ ಪ್ರವಾಹ ಸಂತ್ರಸ್ತರ ನೆರವಿಗೆ ನಿಂತು ಅಲ್ಲಿನ ಮುಖ್ಯಮಂತ್ರಿ ಪರಿಹಾರ ನಿಧಿಗೆ 77 ಕೋಟಿ ದೇಣಿಗೆ ನೀಡಿದ್ದಾರೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ. ‘ಬೂಮ್‌ಚೆಕ್’ ಫುಟ್ಬಾಲ್ ಸ್ಟಾರ್ ರೊನಾಲ್ಡೋ ಅವರ ಅಧಿಕೃತ ಟ್ವೀಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಪರಿಶೀಲಿಸಿದಾಗ 77 ಕೋಟಿ ರು. ಕೇರಳ ಪ್ರವಾಹ ಸಂತ್ರಸ್ತರಿಗೆ ನೀಡಿದ ಯಾವುದೇ ಮಾಹಿತಿಯು ಅವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇರಲಿಲ್ಲ.

ಅಲ್ಲದೆ ಕೇರಳ ಪ್ರವಾಹ ಕುರಿತ ಯಾವುದೇ ಸಂದೇಶಗಳೂ ಅವರ ಖಾತೆಯಲ್ಲಿ ಇಲ್ಲ. ಆದರೆ ಅವರ ನೂರಾರು ಭಾರತೀಯ ಅಭಿಮಾನಿಗಳು ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವಂತೆ ಕೋರಿದ್ದಾರೆ. ಅದರ ಹೊರತಾಗಿ ಕೇರಳಕ್ಕೆ 77 ಕೋಟಿ ರು. ನೀಡಿರುವ ಬಗ್ಗೆ ಅಧಿಕೃತವಾಗಿ ಎಲ್ಲೂ ಮಾಹಿತಿ ಇಲ್ಲ. ಈ ಹಿಂದೆ ಕೂಡ ರೊನಾಲ್ಡೋ ನೇಪಾಳ ಸುನಾಮಿ ಸಂತ್ರಸ್ತರಿಗೆ 80 ಲಕ್ಷ ನೆರವು ನೀಡಿದ್ದಾರೆ ಎಂದು ಸುಳ್ಳುಸುದ್ದಿ ಹಬ್ಬಿಸಲಾಗಿತ್ತು.

(ವೈರಲ್ ಚೆಕ್ ಅಂಕಣ)