ಧಾರವಾಡ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಆಪ್ತ ಮುಜಾಹಿದ್‌ ಕಾಂಟ್ರ್ಯಾಕ್ಟರ್‌ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಧಾರವಾಡ: ಜೆಡಿಎಸ್‌ ಧಾರವಾಡ ಜಿಲ್ಲಾಧ್ಯಕ್ಷ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಆಪ್ತ ಮುಜಾಹಿದ್‌ ಕಾಂಟ್ರ್ಯಾಕ್ಟರ್‌ ಹೃದಯಾಘಾತದಿಂದ ಸೋಮವಾರ ಬೆಳಗ್ಗೆ ನಿಧನರಾದರು. ಭಾನು​ವಾರ ರಾತ್ರಿ ಲಘು ಹೃದಯಾಘಾತವಾದ ಹಿನ್ನೆಲೆಯಲ್ಲಿ ಅವರನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಸೋಮ​ವಾರ ಬೆಳಗ್ಗೆ ತೀವ್ರ ಹೃದಯಾಘಾತವಾದ ಪರಿಣಾಮ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತ​ರಿಗೆ ಪತ್ನಿ, ಐವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾ​ರೆ. ಮೃತರ ಅಂತ್ಯ​ಕ್ರಿಯೆ ಅವರ ಸ್ವಸ್ಥಳವಾದ ಅಳ್ನಾ​ವ​ರ​ದಲ್ಲಿ ಮಂಗ​ಳ​ವಾರ ಬೆಳಗ್ಗೆ 11ರ ವೇಳೆಗೆ ನಡೆ​ಯ​ಲಿದೆ ಎಂದು ಮುಜಾಹಿದ್‌ರ ಪುತ್ರ ಫಾಯಿಮ್‌ ಕಾಂಟ್ರ್ಯಾ​ಕ್ಟರ್‌ ತಿಳಿಸಿದ್ದಾರೆ. 

ಮುಜಾಹಿದ್‌ ಕಾಂಟ್ರ್ಯಾಕ್ಟರ್‌ 13 ವರ್ಷಗಳಿಂದ ಜೆಡಿಎಸ್‌ ಜಿಲ್ಲಾಧ್ಯಕ್ಷರಾಗಿದ್ದರು. ಮುಜಾಹಿದ್‌ರ ಸತತ 4 ದಶಕಗಳ ಹೋರಾಟದ ಫಲವಾಗಿ ಅಳ್ನಾವರಕ್ಕೆ ತಾಲೂಕು ಸ್ಥಾನ ಲಭ್ಯವಾಗಿತ್ತು. ಮುಜಾಹಿದ್‌ ನಿಧನಕ್ಕೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ, ಉಪಾಧ್ಯಕ್ಷ ಎನ್‌.ಎಚ್‌. ಕೋನರಡ್ಡಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿಸೇರಿದಂತೆ ವಿವಿಧ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.