ನಾಳೆಯಿಂದ ಉಡುಪಿಯಲ್ಲಿ ಸಾಧು-ಸಂತರ ಸಮ್ಮೇಳನ ಗೋರಕ್ಷಣೆ, ಅಸ್ಪಶ್ಯತೆ, ಮತಾಂತರ ತಡೆ ಕುರಿತೂ ಚರ್ಚೆ
ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಗೋರಕ್ಷಣೆ, ಅಸ್ಪಶ್ಯತೆ ನಿವಾರಣೆ, ಸಾಮಾಜಿಕ ಸುಧಾರಣೆ ಮತ್ತು ಮತಾಂತರ ತಡೆ - ಈ ಐದು ವಿಚಾರಗಳು ಉಡುಪಿಯಲ್ಲಿ ನ.24ರಿಂದ ನಡೆಯಲಿರುವ ‘ವಿಶ್ವ ಹಿಂದೂ ಧರ್ಮ ಸಂಸದ್’ನಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿವೆ.
ಈ ಕುರಿತು ಬುಧವಾರ ಮಾಹಿತಿ ನೀಡಿದ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ, ರಾಮಮಂದಿರ ನಿರ್ಮಾಣಕ್ಕೆ ಅನುಕೂಲವಾಗುವ ವಿಶೇಷ ವಿಧೇಯಕ ಮಂಡಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ರಾಮಮಂದಿರ ನಿರ್ಮಾಣಕ್ಕೆ ಪೂರಕ ವಾತಾವರಣ ಇದೆ. ಆದರೆ ಅಯೋಧ್ಯೆ ರಾಮಮಂದಿರ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ. ಕೋರ್ಟಿನಿಂದ ವ್ಯತಿರಿಕ್ತ ತೀರ್ಪು ಬಂದರೂ ಬರಬಹುದು. ಆದ್ದರಿಂದ ಕೇಂದ್ರ ಸರ್ಕಾರ ಕೋರ್ಟಿನ ತೀರ್ಪಿಗೆ ಕಾಯದೆ, ರಾಮಮಂದಿರ ನಿರ್ಮಾಣ ಸಾಧ್ಯವಾಗುವಂಥ ವಿಧೇಯಕವೊಂದನ್ನು ಜಾರಿಗೆ ತರಲು ಸಾಧ್ಯವಿದೆ. ಅಥವಾ ಕೇಂದ್ರ ಸರ್ಕಾರವೇ ಆಸಕ್ತಿ ವಹಿಸಿ ಆಯೋಧ್ಯೆ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಇತ್ಯರ್ಥಗೊಳಿಸಬೇಕು. ಈ ಬಗ್ಗೆ ಉಡುಪಿ ಧರ್ಮ ಸಂಸದ್‌ನಲ್ಲಿ ತಾನೂ ಸೇರಿದಂತೆ ದೇಶದ ನಾನಾ ಕಡೆಗಳಿಂದ ಬರುವ ಸಾಧು ಸಂತರು ಚರ್ಚೆ ನಡೆಸಿ ನಿರ್ಣಯವೊಂದನ್ನು ಕೈಗೊಳ್ಳಲಿದ್ದೇವೆ ಎಂದು ಪೇಜಾವರ ಶ್ರೀಗಳು ಹೇಳಿದರು.
ಗೋರಕ್ಷಣೆಗೆ ರಾಜ್ಯಗಳನ್ನು ಒಪ್ಪಿಸಬೇಕು: ಗೋಹತ್ಯೆ ನಿಷೇಧ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದರೂ ಅದನ್ನು ಅನುಷ್ಠಾನಕ್ಕೆ ತರಬೇಕಾದರೆ ರಾಜ್ಯ ಸರ್ಕಾರಗಳ ಸಹಕಾರ ಬೇಕು. ಆದ್ದರಿಂದ ರಾಜ್ಯಗಳಿಂದ ಸಹಕಾರ ಪಡೆಯುವುದಕ್ಕೆ ಅನುಕೂಲವಾಗುವಂತೆ ನಿರ್ಣಯವೊಂದನ್ನು ಧರ್ಮಸಂಸದ್‌ನಲ್ಲಿ ತೆಗೆದುಕೊಳ್ಳಲಾಗುವುದು ಎಂಬ ಆಶಯ ವನ್ನು ಶೀಗಳು ವ್ಯಕ್ತಪಡಿಸಿದರು.
ಲಿಂಗಾಯತ, ವೀರಶೈವರು ಹಿಂದುಗಳೇ: ಈ ಧರ್ಮ ಸಂಸದ್ ಗೆ ಲಿಂಗಾಯತ-ವೀರಶೈವ ಮತಗಳ ಮಠಾಧೀಶರನ್ನೂ ಆಹ್ವಾನಿಸಲಾಗಿದೆ. ಯಾರೆಲ್ಲಾ ಬರುತ್ತಾರೆ ಗೊತ್ತಿಲ್ಲ. ಅವರೂ ಹಿಂದುಗಳೇ ಆಗಿರುವುದರಿಂದ ಈ ಧರ್ಮಸಂಸದ್‌ನಲ್ಲಿ ಭಾಗವಹಿಸಬೇಕು ಎಂದು ಅಭಿಪ್ರಾಯಪಟ್ಟರು. ಹಿಂದು ಪ್ರವಾದಿ-ಸಂತರಿಂದ ಪ್ರವರ್ತಿತ ಎಲ್ಲಾ ಮತಗಳು ಹಿಂದೂ ಧರ್ಮಕ್ಕೆ ಸೇರಿವೆ. ಜೈನ, ಬೌದ್ಧ, ಸಿಖ್ ಮತಗಳನ್ನು ಸಂವಿಧಾನ ಪ್ರತ್ಯೇಕ ಧರ್ಮಗಳೆಂದು ಗುರುತಿಸಿದ್ದರೂ, ಅವು ಹಿಂದೂ ಸಂತರಿಂದಲೇ ಹುಟ್ಟಿಕೊಂಡಿವೆ ಮತ್ತು ವಿಶ್ವ ಹಿಂದು ಪರಿಷತ್ ಅವುಗಳನ್ನು ಹಿಂದೂ ಧರ್ಮದ
ಭಾಗವೆಂತಲೇ ಪರಿಗಣಿಸುತ್ತದೆ. ಆದ್ದರಿಂದ ಈ ಮತಗಳ ಧಾರ್ಮಿಕ ನಾಯಕರು ಈ ಸಂಸದ್‌ನಲ್ಲಿ ಭಾಗವಹಿಸುತ್ತಾರೆ ಎಂದ ಅವರು, ಬೌದ್ಧರ ದಲಾಯಿ ಲಾಮ ಅವರೇ ‘ಧರ್ಮ ಸಂಸದ್’ ಅನ್ನು ಉದ್ಘಾಟಿಸಿದ್ದನ್ನು ಶ್ರೀಗಳು ಉದಾಹರಿಸಿದರು.
