ತಿರುವನಂತಪುರ (ಜ. 15): ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶ ಸಾಧ್ಯವಾದ ಬೆನ್ನಲ್ಲೇ, ಮಹಿಳೆಯರಿಗೆ ಅಘೋಷಿತ ನಿರ್ಬಂಧ ಇದ್ದ ಅಗಸ್ತ್ಯಮಲೆಗೆ ಮಹಿಳೆಯರ ಪ್ರವೇಶ ಆಗಿದೆ.

ಅಗಸ್ತ್ಯಮಲೆಗೆ ಸೋಮವಾರ ಬೆಳಗ್ಗೆ 100 ಜನರ ಮೊದಲ ತಂಡ ಚಾರಣ ಕೈಗೊಂಡಿದ್ದು ಇದರಲ್ಲಿ ದನ್ಯಾ ಸನಾಲ್‌ ಕೂಡಾ ಸೇರುವ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಿದೆ. ಅಗಸ್ತ್ಯ ಪರ್ವತದಲ್ಲಿ ಅಗಸ್ತ್ಯ ಮುನಿಗಳ ಮೂರ್ತಿ ಇದ್ದು, ಅದನ್ನು ಕನಿ ಬುಡಕಟ್ಟು ಜನಾಂಗದವರು ಆರಾಧಿಸುತ್ತಾರೆ. ಅಲ್ಲಿಗೆ ಮಹಿಳೆಯರು ಹೋಗಕೂಡದು ಎಂಬ ಸಂಪ್ರದಾಯ ಪಾಲನೆಯಾಗುತ್ತಿತ್ತು. ಈ ಸಂಬಂಧ ಕೇರಳ ಹೈಕೋರ್ಟಿನಲ್ಲಿ ಕಾನೂನು ಹೋರಾಟ ನಡೆದಿತ್ತು. 2019ರಿಂದ ಆರಂಭವಾಗಿರುವ ಚಾರಣ ಅವಧಿಯಲ್ಲಿ ಲಿಂಗದ ಆಧಾರದ ಮೇಲೆ ಯಾವುದೇ ನಿರ್ಬಂಧ ಹೇರಕೂಡದು ಎಂದು 2018ರ ನ.30ರಂದು ಹೈಕೋರ್ಟ್‌ ತೀರ್ಪು ನೀಡಿತ್ತು. ಅದರ ಆಧಾರದಲ್ಲಿ ಕೇರಳ ಸರ್ಕಾರ ಮಹಿಳೆಯರ ಚಾರಣಕ್ಕೆ ಅನುಮತಿ ನೀಡಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಅರಣ್ಯ ಇಲಾಖೆ ಈ ಬಾರಿ ಮಹಿಳೆಯರಿಗೂ ಚಾರಣಕ್ಕೆ ಅವಕಾಶ ಕಲ್ಪಿಸಿತ್ತು. ತಲಾ 1000 ರು. ಪಾವತಿಸಿ, ದಿನಕ್ಕೆ 100 ಮಂದಿ ಚಾರಣ ಕೈಗೊಳ್ಳಬಹುದಾಗಿದೆ. ಸೋಮವಾರ ತಲಾ 20 ಜನರ 5 ತಂಡವನ್ನು ಚಾರಣಕ್ಕೆ ಕಳುಹಿಸಿಕೊಡಲಾಯ್ತು. ಇದರಲ್ಲಿ ರಕ್ಷಣಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿರುವ ದನ್ಯಾ ಕೂಡಾ ಸೇರಿದ್ದಾರೆ. ಪ್ರಸಕ್ತ ವರ್ಷ ಒಟ್ಟು 4000 ಜನ ಚಾರಣಕ್ಕೆ ಹೆಸರು ನೊಂದಾಯಿಸಿಕೊಂಡಿದ್ದು ಈ ಪೈಕಿ 100 ಮಹಿಳೆಯರು ಸೇರಿದ್ದಾರೆ.

ಜ.14ರಿಂದ ಮಾ.1ರವರೆಗೆ ಅಗಸ್ತ್ಯಮಲೆಗೆ ಚಾರಣ ಅವಕಾಶವಿರುತ್ತದೆ. ಕೇರಳ- ತಮಿಳುನಾಡು ಗಡಿಯ ನೆಯ್ಯಾರ್‌ ವನ್ಯಜೀವಿ ಧಾಮದಲ್ಲಿ ಈ ಪರ್ವತ ಇದ್ದು, 6129 ಅಡಿ ಎತ್ತರವಿದೆ. ತಿರುವನಂತಪುರದಿಂದ 50 ಕಿ.ಮೀ. ದೂರದಲ್ಲಿರುವ ಬೊನಕಾಡ್‌ವರೆಗೆ ವಾಹನಗಳು ಹೋಗುತ್ತವೆ. ಅಲ್ಲಿಂದ 28 ಕಿ.ಮೀ. ದೂರವನ್ನು ನಡೆದು ತಲುಪಬೇಕು. ಇದಕ್ಕೆ ಎರಡು ದಿನ ಬೇಕಾಗುತ್ತದೆ. ಸಂಜೆ ಹೊತ್ತು ಆನೆ, ಕಾಡುಕೋಣಗಳ ಹಾವಳಿ ಹೆಚ್ಚಿರುವುದರಿಂದ ಮೊದಲ ದಿನ 20 ಕಿ.ಮೀ.ಯನ್ನು ನಸುಕಿನ ಜಾವ ತಲುಪಬೇಕು. ಎರಡನೇ ದಿನ 8 ಕಿ.ಮೀ. ನಡೆಯಬೇಕು.