ರಾಜ್ಯಸಭಾ ಚುನಾವಣೆಯ ಹಿನ್ನಲೆಯಲ್ಲಿ ಗುಜರಾತ್'ನಲ್ಲಿನ ಕಾಂಗ್ರೆಸ್ ರಾಜಕಾರಣ ಈಗ ಕರ್ನಾಟಕಕ್ಕೆ ಶಿಫ್ಟ್ ಆಗಿದೆ. ಉಳಿದಿರುವ ಶಾಸಕರೂ ಕೈತಪ್ಪಿ ಹೋಗದಂತೆ  ಬೆಂಗಳೂರಿಗೆ ಕರೆತಂದು ರೆಸಾರ್ಟ್'ನಲ್ಲಿ  ಹಿಡಿದಿಟ್ಟುಕೊಳ್ಳಲಾಗಿದೆ. ಈ ಮಧ್ಯೆ ಪ್ರವಾಹ ಪೀಡಿತ ಕ್ಷೇತ್ರಗಳ ಮೂವರು ಶಾಸಕರು ವಾಪಸ್ ತೆರಳುವುದಾಗಿ ಹಠ ಹಿಡಿದಿದ್ದು, ಅವರಿಗೆ ಮೊಬೈಲ್ ಬಳಕೆ ನಿರಾಕರಿಸಲಾಗಿದೆ

ಅಹಮದಾಬಾದ್(ಜು.30): ರಾಜ್ಯಸಭಾ ಚುನಾವಣೆಯ ಹಿನ್ನಲೆಯಲ್ಲಿ ಗುಜರಾತ್'ನಲ್ಲಿನ ಕಾಂಗ್ರೆಸ್ ರಾಜಕಾರಣ ಈಗ ಕರ್ನಾಟಕಕ್ಕೆ ಶಿಫ್ಟ್ ಆಗಿದೆ. ಉಳಿದಿರುವ ಶಾಸಕರೂ ಕೈತಪ್ಪಿ ಹೋಗದಂತೆ ಬೆಂಗಳೂರಿಗೆ ಕರೆತಂದು ರೆಸಾರ್ಟ್'ನಲ್ಲಿ ಹಿಡಿದಿಟ್ಟುಕೊಳ್ಳಲಾಗಿದೆ. ಈ ಮಧ್ಯೆ ಪ್ರವಾಹ ಪೀಡಿತ ಕ್ಷೇತ್ರಗಳ ಮೂವರು ಶಾಸಕರು ವಾಪಸ್ ತೆರಳುವುದಾಗಿ ಹಠ ಹಿಡಿದಿದ್ದು, ಅವರಿಗೆ ಮೊಬೈಲ್ ಬಳಕೆ ನಿರಾಕರಿಸಲಾಗಿದೆ.

ರೆಸಾರ್ಟ್ ನಲ್ಲಿ ಗುಜರಾತ್​ ಕಾಂಗ್ರೆಸ್ ಶಾಸಕರು: ರಾಜ್ಯಸಭೆ ಚುನಾವಣೆ ಎಫೆಕ್ಟ್​ , ಭೀತಿಯಲ್ಲಿ ಕಾಂಗ್ರೆಸ್

ರಾಜ್ಯಸಭಾ ಚುನಾವಣೆ ಗುಜರಾತ್ ರಾಜಕಾರಣವನ್ನೇ ಅಲ್ಲಾಡಿಸಿಬಿಟ್ಟಿದೆ. ಬಿಜೆಪಿ ಉರುಳಿಸಿರುವ ದಾಳಕ್ಕೆ ತತ್ತರಿಸಿರುವ ಕಾಂಗ್ರೆಸ್ ತನ್ನ ಉಳಿದ ಶಾಸಕರನ್ನು ಉಳಿಸಿಕೊಳ್ಳುವ ಅನಿವಾರ್ಯತೆಗೆ ಬಿದ್ದಿದೆ. ಹೀಗಾಗಿ ೪೪ ಶಾಸಕರನ್ನು ಬೆಂಗಳೂರಿಗೆ ಕಳುಹಿಸಿದ್ದು, ಖಾಸಗಿ ರೆಸಾರ್ಟ್ ನಲ್ಲಿ ಹೈಫೈ ಸೌಲಭ್ಯ ಪಡೆಯುತ್ತಿದ್ದಾರೆ. ನಿನ್ನೆ ಬೆಳಗಿನ ಜಾವ ಎರಡು ತಂಡವಾಗಿ ೪೦ ಶಾಸಕರು ಬೆಂಗಳೂರಿಗೆ ಬಂದಿದ್ದು, ರಾಮನಗರದ ಬಿಡದಿ ರೆಸಾರ್ಟ್ ನಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್​ ಉಸ್ತುವಾರಿಯಲ್ಲಿ ಆತಿಥ್ಯ ಒದಗಿಸಲಾಗುತ್ತಿದೆ. ಆದರೆ ಗುಜರಾತ್'ನಲ್ಲಿ ವ್ಯಾಪಕ ಪ್ರವಾಹ ಇದ್ದರೂ ಕಾಂಗ್ರೆಸ್ ಶಾಸಕರು ರೆಸಾರ್ಟ್ ರಾಜಕಾರಣದಲ್ಲಿ ತೊಡಗಿರುವುದನ್ನು ಬಿಜೆಪಿ ಟೀಕಿಸಿದೆ.

ಈ ಮಧ್ಯೆ ಪ್ರವಾಹ ಪೀಡಿತ ಮೂರು ಕ್ಷೇತ್ರಗಳ ಶಾಸಕರು ದೂರವಾಣಿ ಮೂಲಕ ತಮ್ಮ ಕ್ಷೇತ್ರದಿಂದ ಜನಾಕ್ರೋಶ ಎದುರಿಸಿದ್ದು, ವಾಪಸ್ ಗುಜರಾತ್ ಗೆ ಮರಳುವುದಾಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ರೆಸಾರ್ಟ್ ನಲ್ಲಿ ಮೂವರು ಶಾಸಕರಿಗೆ ಮೊಬೈಲ್ ಬಳಕೆಯನ್ನು ನಿರಾಕರಿಸಲಾಗಿದೆ. ಇನ್ನು ರೆಸಾರ್ಟ್ ಗೆ ಕಾಂಗ್ರೆಸ್ ಮುಖಂಡರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶ ನಿರ್ಬಂದಿಸಲಾಗಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಇನ್ನು ರೆಸಾರ್ಟ್'ನಲ್ಲಿ ಶಾಸಕರಿಗೆ ಎಲ್ಲಾ ರೀತಿಯ ಐಷಾರಾಮಿ ಸೌಲಭ್ಯ ಕಲ್ಪಿಸಲಾಗಿದ್ದು, ರಾಜ್ಯದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು ಮತ್ತು ದೇವಸ್ಥಾನಗಳಿಗೆ ಕರೆದೊಯ್ಯುವ ಚಿಂತನೆಯೂ ನಡೆದಿದೆ. ಉಸ್ತುವಾರಿ ವಹಿಸಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ‌ಮುಖಾಂತರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮತ್ತು ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್​ಗೆ ಶಾಸಕರ ದಿನಚರಿ ಮಾಹಿತಿ ರವಾನೆಯಾಗ್ತಿದೆ.

ಇನ್ನೊಂದೆಡೆ ಇನ್ನೂ ನಾಲ್ಕು ಶಾಸಕರು ಇಂದು ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಆಗಸ್ಟ್ ೮ ರಂದು ರಾಜ್ಯಸಭಾ ಚುನಾವಣೆಯ ಮತದಾನವಿದ್ದು, ಆಗಸ್ಟ್ ೭ರವರೆಗೂ ಎಲ್ಲಾ ಶಾಸಕರು ಇಲ್ಲೇ ಉಳಿಯಲಿದ್ದಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಇಡೀ ದೇಶದ ಕಣ್ಣೀಗ ರಾಜ್ಯದ ಮೇಲೆ ಬಿದ್ದಿದೆ. ಅದರಲ್ಲೂ ಪ್ರಧಾನಿಯವರ ತವರು ಗುಜರಾತ್​ ರಾಜಕಾರಣ ನಮ್ಮ ರಾಜ್ಯಕ್ಕೆ ಶಿಫ್ಟ್​ ಆಗಿರೋದು ಈಗ ಕುತೂಹಲ ಕೆರಳಿಸಿದೆ.