'ಬಿಜೆಪಿಗೆ ಅವಕಾಶ ಕೊಡದೇ ದೇವೇಗೌಡ್ರೇ ಕಾಂಗ್ರೆಸ್‌ ಮುಕ್ತ ಮಾಡ್ತಾರೆ' ಹೀಗಂತಾ ಹೇಳಿದ್ಯಾರು? ಇಲ್ಲಿದೆ ವಿವರ

ಬೆಂಗಳೂರು. [ಅ.23]: ರಾಜ್ಯವನ್ನು ಕಾಂಗ್ರೆಸ್‌ ಮುಕ್ತ ಮಾಡಲು ಬಿಜೆಪಿಗೆ ಅವಕಾಶ ಸಿಗುವುದಿಲ್ಲ, ಆ ಕೆಲಸವನ್ನು ದೇವೆಗೌಡರು ಮತ್ತು ಜೆಡಿಎಸ್‌ನವರೇ ಮಾಡಿ ಮುಗಿಸುತ್ತಾರೆ ಎಂದು ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸೋಮವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶತಮಾನದ ಇತಿಹಾಸ ಇರುವ ಕಾಂಗ್ರೆಸ್‌ ಪಕ್ಷ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್‌ ಮುಂದೆ ತಲೆ ತಗ್ಗಿಸಿದೆ. ಇದು ಕಾಂಗ್ರೆಸ್‌ ಪಾಲಿಗೆ ಧೃತರಾಷ್ಟಆಲಿಂಗನವಾಗಲಿದೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಪೂರ್ಣ ಶಕ್ತಿ ತೊಡಗಿಸಿಕೊಂಡಿದೆ. ಆದ್ದರಿಂದ ಬಿಜೆಪಿಯ ಗೆಲುವಿನ ಓಟ ತಡೆಯಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಇನ್ನಿಲ್ಲದ ಕಸರತ್ತು ಮಾಡುತ್ತಿವೆ. ಅದಕ್ಕಾಗಿಯೇ ಬದ್ಧ ವೈರಿಗಳಾದ ಸಿದ್ದರಾಮಯ್ಯ ಮತ್ತು ಎಚ್‌.ಡಿ.ದೇವೆಗೌಡ ಪ್ರಥಮ ಬಾರಿಗೆ ಜಂಟಿ ಸುದ್ದಿಗೋಷ್ಠಿಯನ್ನೂ ನಡೆಸಿದ್ದಾರೆ ಎಂದು ಟೀಕಿಸಿದರು.

ವಿಧಾನಸಭೆಯಲ್ಲಿ ಮಂತ್ರಿಗಳೇ ಇಲ್ಲ, ಮಂತ್ರಿಗಳು ತಂತಮ್ಮ ಜಿಲ್ಲೆಗಳಿಗೂ ಹೋಗುತ್ತಿಲ್ಲ, ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎನ್ನುವ ಒಂದೇ ಉದ್ದೇಶದಿಂದ ಎಲ್ಲಾ ಮಂತ್ರಿಗಳು ಚುನಾವಣೆ ನಡೆಯುತ್ತಿರುವ 5 ಲೋಕಸಭಾ ಕ್ಷೇತ್ರಗಳಿಗೆ ಹೋಗಿ ಕುಳಿತಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಆಡಳಿತವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕೋಟ ಅಸಮಾಧಾನ ವ್ಯಕ್ತಪಡಿಸಿದರು.