ಉನ್ನಾವೋ :  ದೆಹಲಿಯಲ್ಲಿರುವ ಜಾಮಾ ಮಸೀದಿಯನ್ನು ಧ್ವಂಸ ಮಾಡಿ, ಈ ವೇಳೆ ಮೆಟ್ಟಿಲುಗಳಡಿಯಲ್ಲಿ ದೇವರ ವಿಗ್ರಹಗಳು ಪತ್ತೆಯಾಗದಿದ್ದರೆ, ನೇಣಿಗೆ ಶರಣಾಗಲೂ ಸಿದ್ಧ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. 

ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಸಾಕ್ಷಿ ಮಹರಾಜ್ ಈ ಹೇಳಿಕೆ ನೀಡಿದ್ದಾರೆ.  

ಈ ಹಿಂದೆ ಅನೇಕ ರೀತಿಯ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದ ಸಾಕ್ಷಿ ಮಹರಾಜ್ ಇದೀಗ ಇಂತಹ ಹೇಳಿಕೆ ನೀಡಿ ಮತ್ತೊಮ್ಮೆ ವಿವಾದಕ್ಕೆ ಈಡಾಗಿದ್ದಾರೆ.  ಇದೀಗ 1644 ರಿಂದ 1656ರಲ್ಲಿ ಶಾಜಾನ್ ದಿಲ್ಲಿಯಲ್ಲಿ  ನಿರ್ಮಾಣ ಮಾಡಿದ್ದ  ಬೃಹತ್   ಜಾಮಾ ಮಸೀದಿ ಉರುಳಿಸುವ ಮಾತನಾಡಿದ್ದಾರೆ.

ಇನ್ನು ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಂತಿಮ ತೀರ್ಪು ನೀಡದ ಸಂಬಂಧವೂ ಮಾತನಾಡಿರುವ ಅವರು ಸುಪ್ರೀಂ ಕೋರ್ಟ್ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದಾರೆ. ಅನೇಕ ಪ್ರಕರಣಗಳ ಬಗ್ಗೆ  ತೀರ್ಪು ಪ್ರಕಟಿಸಿರುವ ಸುಪ್ರೀಂಕೋರ್ಟ್ ಅಯೋಧ್ಯೆ ಪ್ರಕರಣ ಸಂಬಂಧ ಇನ್ನಾದರೂ ಕೂಡ ಯಾವುದೇ ರೀತಿಯ ತೀರ್ಪು ಪ್ರಕಟಿಸದೇ ಇರುವುದು ಸರಿಯಲ್ಲ ಎಂದಿದ್ದಾರೆ. 

ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ರಾಮಮಂದಿರ ನಿರ್ಮಾಣ ಸಂಬಂಧ ಕಾನೂನೊಂದನ್ನು ಪಾಸ್ ಮಾಡಬಹದು ಎನ್ನುವ ನಿರೀಕ್ಷೆ ತಮ್ಮಲ್ಲಿದೆ.  2019ರ ಲೋಕಸಭಾ ಚುನಾವಣೆಗೂ ಮುನ್ನ ರಾಮಮಂದಿರ ನಿರ್ಮಾಣ ಮಾಡಲು ಆರಂಭಿಸುತ್ತದೆ ಎನ್ನುವ ಭರವಸೆ ಇದೆ ಎಂದು ಹೇಳಿದ್ದಾರೆ.