ನವದೆಹಲಿ, [ಸೆ.17]: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್​ ಜಾಮೀನು ಅರ್ಜಿಯವನ್ನು ನಾಳೆಗೆ [ಸೆ.18] ಮುಂದೂಡಿ ಅಲ್ಲಿವರೆಗೂ ನ್ಯಾಯಾಂಗ ಬಂಧನ ವಿಧಿಸಿ ಇ.ಡಿ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.

ಬ್ರೇಕಿಂಗ್: ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ED ಕೋರ್ಟ್‌

ಡಿಕೆ ಶಿವಕುಮಾರ್ ಅವರನ್ನು ಇಂದಿನಿಂದ 14 ದಿನಗಳವರಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಇಡಿ ವಿಶೇಷ ಕೋರ್ಟ್ ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಡಿಕೆಶಿ ಅಕ್ಟೋಬರ್ 1ರ ವರೆಗೆ ನ್ಯಾಯಾಂಗ ಬಂಧನ ಅಂದರೆ ತಿಹಾರ್ ಜೈಲಿಗೆ ಹೋಗಬೇಕಾಗಿದೆ. ಆದ್ರೆ ಅವರ ಆರೋಗ್ಯ ಸ್ಥಿತಿ ಚೆನ್ನಾಗಿ ಇಲ್ಲದ ಕಾರಣ ಜೈಲು ಬದಲು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಕೋರ್ಟ್ ಸೂಚಿಸಿದೆ.

ಡಿಕೆ ಶಿವಕುಮಾರ್‌ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಡಿ.ಕೆ.ಶಿಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸುತ್ತಿದ್ದಂತೆ ಅವರ ಪರ ವಕೀಲ ಅಭಿಷೇಕ್​ ಮನುಸಿಂಘ್ವಿ ವಾದ ಮಂಡಿಸಿ, ನನ್ನ ಕಕ್ಷಿದಾರರ ಆರೋಗ್ಯ ಸರಿಯಿಲ್ಲ. ಹಾಗಾಗಿ ಜೈಲು ಬೇಡ. ಆಸ್ಪತ್ರೆಯಲ್ಲಿ ಇರಲಿ ಎಂದು ಮನವಿ ಮಾಡಿದರು.

ಆದರೆ, ಇದಕ್ಕೆ ಆಕ್ಷೇಪಿಸಿದ್ದ ಇ.ಡಿ.ಅಧಿಕಾರಿಗಳು, ಆರ್​ಎಂಎಲ್​ ಆಸ್ಪತ್ರೆಯಿಂದ ವೈದ್ಯರು ಡಿ.ಕೆ.ಶಿವಕುಮಾರ್​ ಅವರನ್ನು ಈಗಾಗಲೇ ಡಿ​ಸ್ಚಾರ್ಜ್ ​ ಮಾಡಿದ್ದಾರೆಂದು ವಾದ ಮಾಡಿ ಡಿಸ್ಚಾರ್ಜ್ ಸಮರಿಯನ್ನು ಕೋರ್ಟ್​ಗೆ ಸಲ್ಲಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಅಜಯ್​ಕುಮಾರ್​ ಕುಹರ್​ ಅವರು, ಡಿ.ಕೆ.ಶಿವಕುಮಾರ್​ ತಿಹಾರ್​ ಜೈಲಿಗೆ ಬೇಡ, ಮೊದಲು ಆಸ್ಪತ್ರೆಗೆ ಕರೆದುಕೊಮಡು ಹೋಗುವಂತೆ ಸೂಚಿಸಿದರು.  

ಆಸ್ಪತ್ರೆಯಲ್ಲಿ ವೈದ್ಯರು ಏನು ಹೇಳುತ್ತಾರೋ, ಅಂದ್ರೆ ಡಿಕೆಶಿಗೆ ಚಿಕಿತ್ಸೆ ಅವಶ್ಯಕತೆ ಇದೆ ಎಂದು ಹೇಳಿದರೆ ಆಸ್ಪತ್ರೆಗೆ ದಾಖಲಿಸಿ. ಇಲ್ಲ ಡಿಕೆಶಿ ಚೆನ್ನಾಗಿದ್ದಾರೆ ಎಂದು ಹೇಳಿದರೆ ಅವರನ್ನು ಜೈಲಿಗೆ ಕರೆದುಕೊಂಡು ಹೋಗಿ ಎಂದು ಜಡ್ಜ್ ಹೇಳಿದ್ದಾರೆ.

ನ್ಯಾಯಾಧೀಶರ ಸೂಚನೆಯಂತೆ ಡಿ.ಕೆ.ಶಿವಕುಮಾರ್​ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು. ಈ ವೇಳೆ ವೈದ್ಯರು ಡಿ.ಕೆ.ಶಿವಕುಮಾರ್​ ಅವರು ಆಸ್ಪತ್ರೆಯಲ್ಲಿ ದಾಖಲಾಗಲಿ ಎಂದು ಸೂಚಿಸಿದರೆ ಅವರು ಅಲ್ಲಿಯೇ ಇರಬೇಕಾಗುತ್ತದೆ. ಚಿಕಿತ್ಸೆಯ ಅಗತ್ಯವಿಲ್ಲ ಎಂದು ಹೇಳಿದರೆ ಡಿ.ಕೆ.ಶಿವಕುಮಾರ್​ ತಿಹಾರ್​ ಜೈಲಿಗೆ ಹೋಗಬೇಕಾಗುತ್ತದೆ. ಇದ್ರಿಂದ ಸದ್ಯದ ಮಟ್ಟಿಗೆ ವೈದ್ಯರೇ ಜಡ್ಜ್ ಆಗಿದ್ದು, ಡಿಕೆಶಿಯನ್ನು ತಿಹಾರ್ ಜೈಲಿಗೆ ಕಳುಹಿಸುವುದು ಬಿಡುವುದು ವೈದ್ಯರ ಕೈನಲ್ಲಿದೆ.

ಇನ್ನು ನಾಳೆ ಡಿ.ಕೆ.ಶಿವಕುಮಾರ್​ ಅವರ ಜಾಮೀನು ಅರ್ಜಿ ವಿಚಾರಣೆಯಿದ್ದು ಒಂದೊಮ್ಮೆ ಬೇಲ್​ ಸಿಕ್ಕರೆ ಅವರು ಬಿಡುಗಡೆಯಾಗುತ್ತಾರೆ. ಇಲ್ಲದಿದ್ದಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಬೇಕಾಗುತ್ತದೆ.

ಒಂದು ವೇಳೆ ನಾಳೆಗೆ ಮುಂದೂಡಿರುವ ಕೋರ್ಟ್ ಜಾಮೀನು ತಿರಸ್ಕರಿಸಿದರೆ ಡಿಕೆ ಶಿವಕುಮಾರ್ ದೆಹಲಿ ಹೈಕೋರ್ಟ್ , ಸುಪ್ರೀಂ ಕೋರ್ಟ್ ಗೆ ಹೋಗಲು ಅವಕಾಶಗಳಿವೆ.