ನವದೆಹಲಿ(ಜು.24): ಕಾಶ್ಮೀರ ವಿವಾದ ಸಂಬಂಧ ಅಮರಿಕ ಮಾತ್ರವಲ್ಲ, ಜಗತ್ತಿನ ಯಾವ ದೇಶದ ಮಧ್ಯಸ್ಥಿಕೆಯೂ ಭಾರತಕ್ಕೆ ಬೇಕಿಲ್ಲ ಎಂದು ಕೇಂದ್ರ ಸರ್ಕಾರ ಖಡಕ್ ಸ್ಪಷ್ಟನೆ ನೀಡಿದೆ.

ಈ ಕುರಿತು ಲೋಕಸಭೆಯಲ್ಲಿ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಧಾನಿ ಮೋದಿ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಡೋನಾಲ್ಡ್ ಟ್ರಂಪ್ ಅವರನ್ನು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿ-20 ಶೃಂಗಸಭೆ ವೇಳೆ ಮೋದಿ-ಟ್ರಂಪ್ ಭೇಟಿಯಾದಾಗ ಕಾಶ್ಮೀರ ವಿವಾದ ಬಗೆಹರಿಸುವಂತೆ ಟ್ರಂಪ್ ಅವರಲ್ಲಿ ಮೋದಿ ಮನವಿ ಮಾಡಿದ್ದಾರೆ ಎಂಬುದು ಕೇವಲ ಊಹಾಪೋಹ ಎಂದು ರಾಜನಾಥ್ ಹೇಳಿದರು.

ಕಾಶ್ಮೀರ ವಿಚಾರವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಟ್ರಂಪ್ ಹೇಳಿಕೆ ಭಾರತದಲ್ಲಿ ವಿವಾದ ಸೃಷ್ಟಿ ಮಾಡಿದ್ದು, ಈ ಕುರಿತು ಪ್ರಧಾನಿ ಮೋದಿ ಖುದ್ದು ಸ್ಪಷ್ಟನೆ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.