ನವದೆಹಲಿ(ಮಾ.05): ರಕ್ತ ಎಲ್ಲಿ?, ಶವಗಳೆಲ್ಲಿ?, ದಾಳಿಯ ಸಾಕ್ಷಿ ಕೊಡಿ, ಹೋಗಲಿ ಎಷ್ಟು ಜನ ಸತ್ತಿದ್ದಾರೆ ಅದನ್ನಾದ್ರೂ ಹೇಳಿ, ಇವು ಬಾಲಾಕೋಟ್ ವಾಯುದಾಳಿ ಬಳಿಕ ವಿಪಕ್ಷಗಳು ಸರ್ಕಾರವನ್ನು ಕೇಳುತ್ತಿರುವ ಪ್ರಶ್ನೆ.

ಬಾಲಾಕೋಟ್ ದಾಳಿಯ ಕುರಿತು ಸರ್ಕಾರ, ವಾಯುಸೇನೆ ಈಗಾಗಲೇ ಹಲವು ಬಾರಿ ಸ್ಪಷ್ಟನೆ ನೀಡಿವೆ. ಅಲ್ಲದೇ ದಾಳಿಯ ಕುರಿತು ಹಲವು ಸಾಕ್ಷ್ಯಗಳನ್ನೂ ಒದಗಿಸಿವೆ. ಆದರೆ ದಾಳಿಯಲ್ಲಿ ಎಷ್ಟು ಉಗ್ರರು ಸಾವನ್ನಪ್ಪಿದ್ದಾರೆ ಎಂಬುದರ ಕುರಿತು ಇದುವರೆಗೂ ಸ್ಪಷ್ಟ ಮಾಹಿತಿ ನೀಡಿಲ್ಲ.

ಆದರೆ ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ದಾಳಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉಗ್ರರು ಸತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ರಕ್ಷಣಾ ಸಚಿವೆ ಕೂಡ ನಿರ್ದಿಷ್ಟ ಅಂಕಿ ಸಂಖ್ಯೆ ನೀಡಿಲ್ಲ.

ನಿನ್ನೆ ಅಮಿತ್ ಶಾ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುತ್ತಾ ಬಾಲಾಕೋಟ್ ದಾಳಿಯಲ್ಲಿ 250 ಉಗ್ರರು ಸತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ವಾಯುಸೇನಾ ಮುಖ್ಯಸ್ಥ ಬಿಎಸ್ ಧನೋಹಾ ದಾಳಿಯಲ್ಲಿ ಎಷ್ಟು ಉಗ್ರರು ಸತ್ತಿದ್ದಾರೆ ಎಂದು ಲೆಕ್ಕ ಹಾಕಿಲ್ಲ ಎಂದು ಹೇಳಿದ್ದರು.

ಸದ್ಯ ಈ ಕುರಿತು ರಕ್ಷಣಾ ಸಚಿವೆ ಅಧಿಕೃತ ಹೇಳಿಕೆ ನೀಡಿದ್ದು, ಅವರೂ ಕೂಡ ಸತ್ತ ಉಗ್ರರ ಸಂಖ್ಯೆ ಕುರಿತು ಯಾವುದೇ ಮಾಹಿತಿ ನೀಡಿಲ್ಲ.