ಆದೇಶ ಜಾರಿಗೆ ಯುಜಿಸಿಗೆ ಸುಪ್ರೀಂ ಸೂಚನೆ

ನವದೆಹಲಿ: ಡೀಮ್ಡ್ ಶಿಕ್ಷಣ ಸಂಸ್ಥೆಗಳು ತಮ್ಮ ಹೆಸರಿನ ಮುಂದೆ ‘ವಿಶ್ವವಿದ್ಯಾಲಯ’ ಎಂದು ಹಾಕಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಈ ಆದೇಶವನ್ನು ತಿಂಗಳೊಳಗೆ ಜಾರಿಗೊಳಿಸುವಂತೆ ಕೋರ್ಟ್ ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ ಆದೇಶಿಸಿದೆ. ದೂರ ಶಿಕ್ಷಣ ಮಾದರಿಯಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಆರಂಭಿಸಲು ಮತ್ತು ಪದವಿ

ನೀಡಲು ಡೀಮ್ಡ್ ಶಿಕ್ಷಣ ಸಂಸ್ಥೆಗಳ ಅರ್ಹತೆ ಕುರಿತ ಪ್ರಕರಣವೊಂದರ ವಿಚಾರಣೆ ನಡೆಸಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪು ದೇಶಾದ್ಯಂತ ಇರುವ ನೂರಕ್ಕೂ ಅಧಿಕ ಡೀಮ್ಡ್ ವಿವಿಗಳಿಗೆ ಹಿನ್ನಡೆಯಾಗಿದೆ.

ದೇಶಾದ್ಯಂತ ಸುಮಾರು 117 ಡೀಮ್ಡ್ ವಿವಿಗಳಿವೆ. ಇವುಗಳಲ್ಲಿ ಬಹುತೇಕ ವಿವಿಗಳು ಪೂರ್ಣ ಪ್ರಮಾಣದ ಖಾಸಗಿ ವಿವಿ ಸ್ಥಾನಮಾನ ಬಯಸುತ್ತಿವೆ.

ಡೀಮ್ಡ್ ಶಿಕ್ಷಣ ಸಂಸ್ಥೆಗಳು ಪದವಿ ನೀಡಬಹುದು ಆದರೆ ಯುಜಿಸಿ ಕಾಯ್ದೆಯ ಕಲಂ 23ರನ್ವಯ ತಮ್ಮ ಹೆಸರಿನ ಮುಂದೆ ‘ವಿಶ್ವವಿದ್ಯಾಲಯ’ ಎಂದು ಹಾಕಿಕೊಳ್ಳುವಂತಿಲ್ಲ ಎಂದು ಕೋರ್ಟ್ ಹೇಳಿದೆ.

(ಸಾಂದರ್ಭಿಕ ಚಿತ್ರ)