ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಮಾಣ ಕುಸಿಯುವ ಸಮಸ್ಯೆ ಕರ್ನಾಟಕವೊಂದಕ್ಕೇ ಸೀಮಿತವಾಗಿಲ್ಲ. 2010 -2011 ರಿಂದ 2014- 15ನೇ ಸಾಲಿನವರೆಗೆ ಸರ್ಕಾರಿ ಶಾಲೆಗಳಲ್ಲಿನ ಪ್ರವೇಶಾತಿ ಪ್ರಮಾಣ ದೇಶಾದ್ಯಂತ ಶೇ.15ರಷ್ಟು ಕುಸಿತ ಕಂಡಿದ್ದರೆ, ಖಾಸಗಿ ಶಾಲೆಗಳ ಪ್ರವೇಶಾತಿ ಪ್ರಮಾಣದಲ್ಲಿ ಶೇ.33ರಷ್ಟು ಏರಿಕೆಯಾಗಿದೆ.
ನವದೆಹಲಿ (ಜ.09): ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಮಾಣ ಕುಸಿಯುವ ಸಮಸ್ಯೆ ಕರ್ನಾಟಕವೊಂದಕ್ಕೇ ಸೀಮಿತವಾಗಿಲ್ಲ. 2010 -2011 ರಿಂದ 2014- 15ನೇ ಸಾಲಿನವರೆಗೆ ಸರ್ಕಾರಿ ಶಾಲೆಗಳಲ್ಲಿನ ಪ್ರವೇಶಾತಿ ಪ್ರಮಾಣ ದೇಶಾದ್ಯಂತ ಶೇ.15ರಷ್ಟು ಕುಸಿತ ಕಂಡಿದ್ದರೆ, ಖಾಸಗಿ ಶಾಲೆಗಳ ಪ್ರವೇಶಾತಿ ಪ್ರಮಾಣದಲ್ಲಿ ಶೇ.33ರಷ್ಟು ಏರಿಕೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಲಭ್ಯವಿದ್ದರೂ, ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮ ಶಾಲೆಗಳತ್ತ ಆಕರ್ಷಿತರಾಗುತ್ತಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಸಂಸತ್ತಿನ ಸ್ಥಾಯಿ ಸಮಿತಿಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಖಾಸಗಿ ಸಂಸ್ಥೆಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸರ್ಕಾರಿ ಶಾಲೆಗಳ ಪ್ರವೇಶಾತಿಯಲ್ಲಿ ಕುಸಿತ ಕಂಡುಬಂದಿದೆ. ಅದನ್ನು ತಡೆಯುವ ಉದ್ದೇಶದಿಂದ ಈಗಾಗಲೇ ಕೆಲವು ರಾಜ್ಯ ಸರ್ಕಾರಗಳು ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯಲು ಮುಂದಾಗಿವೆಂದು ಮಾನವ ಸಂಪನ್ಮೂಲ ಸಚಿವಾಲಯ ಸ್ಥಾಯಿ ಸಮಿತಿಗೆ ತಿಳಿಸಿದೆ.
ಮಧ್ಯಾಹ್ನದ ಬಿಸಿಯೂಟ ಸೌಲಭ್ಯ ಇರುವ ಶಾಲೆಗಳಲ್ಲೂ ಪ್ರವೇಶಾತಿ ಪ್ರಮಾಣ ಕುಸಿಯುತ್ತಿರುವುದು ಸಂಸತ್ತಿನ ಸ್ಥಾಯಿ ಸಮಿತಿಯ ಕಳವಳಕ್ಕೆ ಕಾರಣವಾಗಿದೆ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ. ಇದಕ್ಕೆ ಕಾರಣಗಳನ್ನು ಪತ್ತೆ ಹಚ್ಚಿ, ಶೀಘ್ರವಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಸಲಹೆ ಮಾಡಿದೆ.
ಮಧ್ಯಾಹ್ನದ ಬಿಸಿಯೂಟ ಎಂಬುದು ವಿಶ್ವದಲ್ಲೇ ಅತಿದೊಡ್ಡ ಪೌಷ್ಟಿಕ ಯೋಜನೆಯಾಗಿದ್ದು,ನಿತ್ಯ 10 ಕೋಟಿ ಮಕ್ಕಳಿಗೆ ವರದಾನವಾಗಿದೆ. ಮಕ್ಕಳ ಹಾಜರಾತಿ, ಪ್ರವೇಶಾತಿ ಉತ್ತೇಜಿಸುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಗಿತ್ತು. ಈ ಯೋಜನೆಯಿಂದ ಹಾಜರಾತಿ ವೃದ್ಧಿಯಾಗಿದೆಯಾದರೂ, ಹೊಸ ಪ್ರವೇಶಗಳ ಮೇಲೆ ಈ ಯೋಜನೆಯಿಂದ ಯಾವುದೇ ಪರಿಣಾಮವಾದಂತಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
