ಬೆಂಗಳೂರು [ಜು.23]: ಬರ ಪರಿಸ್ಥಿತಿ ಎದುರಿಸುತ್ತಿರುವ ರಾಜ್ಯದ 65 ತಾಲೂಕುಗಳನ್ನು ‘ಬರ ಪೀಡಿತ’ ಎಂಬುದಾಗಿ ಘೋಷಿಸಿ ಎರಡು ವಾರಗಳಲ್ಲಿ ಅಧಿಸೂಚನೆ ಹೊರಡಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್‌ ಸೋಮವಾರ ಮಧ್ಯಂತರ ಆದೇಶ ನೀಡಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ನೆಲೆಸಿದ್ದರೂ ಜಾನುವಾರುಗಳಿಗೆ ಸರ್ಕಾರ ಸಮರ್ಪಕ ಪ್ರಮಾಣದಲ್ಲಿ ಮೇವು ಪೂರೈಸುತ್ತಿಲ್ಲ ಎಂದು ಆರೋಪಿಸಿ ಹೈಕೋರ್ಟ್‌ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ನಿವಾಸಿ ಎ. ಮಲ್ಲಿಕಾರ್ಜುನ ಹೈಕೋರ್ಟ್‌ಗೆ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸೋಮವಾರ ಅರ್ಜಿ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಹಾಗೂ ನ್ಯಾಯಮೂರ್ತಿ ಎಚ್‌.ಟಿ. ನರೇಂದ್ರಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮಧ್ಯಂತರ ಆದೇಶ ಹೊರಡಿಸಿತು.

ಬರಪರಿಸ್ಥಿತಿ ಎದುರಿಸುತ್ತಿರುವ ರಾಜ್ಯದ 65 ತಾಲೂಕುಗಳನ್ನು ‘ಬರ ಪೀಡಿತ’ ಎಂಬುದಾಗಿ ಘೋಷಿಸಿ ಎರಡು ವಾರಗಳಲ್ಲಿ ಅಧಿಸೂಚನೆ ಹೊರಡಿಸಬೇಕು. ಆ ಎಲ್ಲ ತಾಲೂಕುಗಳಲ್ಲಿ ತಲಾ ಒಂದೊಂದು ಗೋಶಾಲೆ ಅಥವಾ ಜಾನುವಾರು ಶಿಬಿರ ಸ್ಥಾಪಿಸಬೇಕು. ಸರ್ಕಾರವೇ ಗುರುತಿಸಿರುವ ಆ 65 ತಾಲೂಕುಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿತು. ರಾಜ್ಯದಲ್ಲಿ ಸದ್ಯ ಬರಪೀಡಿತ ಪ್ರದೇಶದಲ್ಲಿ ಜಾನುವಾರುಗೆ ದಿನ ಪ್ರತಿ 5 ಕೆ.ಜಿ. ಒಣ ಮೇವು ಹಾಗೂ 2 ಕೆ.ಜಿ. ಪಶು ಆಹಾರ ನೀಡಲಾಗುತ್ತಿದೆ. ಈ ಪ್ರಮಾಣವನ್ನು ಪರಿಷ್ಕರಿಸುವ ಬಗ್ಗೆ ಸರ್ಕಾರದಿಂದ ಅಂತಿಮ ತೀರ್ಮಾನ ಆಗುವವರೆಗೆ ಪ್ರತಿ ಜಾನುವಾರುಗೆ 6 ಕೆ.ಜಿ. ಒಣ ಮೇವು, 18 ಕೆ.ಜಿ ಹಸಿರು ಮೇವು ಹಾಗೂ 1 ಕೆ.ಜಿ ಪಶು ಆಹಾರ ನೀಡಬೇಕು ಎಂದು ಮಧ್ಯಂತರ ಆದೇಶದಲ್ಲಿ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿದೆ.

ಅಲ್ಲದೆ, ವಿಪತ್ತು ನಿರ್ವಹಣಾ ಉಪಶಮನ ನಿಧಿ (ಎಸ್‌ಡಿಎಂಎಫ್‌)ಯನ್ನು ರಾಜ್ಯದಲ್ಲಿ ಈವರೆಗೆ ಏಕೆ ಸ್ಥಾಪನೆ ಮಾಡಿಲ್ಲ? ಜಿಲ್ಲಾ ವಿಪತ್ತು ನಿರ್ವಹಣಾ ನಿಧಿ (ಡಿಡಿಎಸ್‌ಆರ್‌) ಜಿಲ್ಲಾ ವಿಪತ್ತು ಉಮಶಮನ ನಿಧಿ (ಡಿಡಿಎಂಎಫ್‌) ಸ್ಥಾಪಿಸಲಾಗಿದೆಯೇ? ಸ್ಥಾಪಿಸಿದ್ದರೆ ಅದರಲ್ಲಿ ಎಷ್ಟುಹಣವಿದೆ? ಕೇಂದ್ರ ಸರ್ಕಾರ 2015ರ ಏ.8ರಂದು ಹೊರಡಿಸಿದ ಮಾರ್ಗಸೂಚಿಗಳನ್ವಯ ಗೋಶಾಲೆ ಅಥವಾ ಜಾನುವಾರು ಶಿಬಿರಗಳಲ್ಲಿ ಮೇವು, ಕುಡಿಯುವ ನೀರು ಹಾಗೂ ಪಶುವೈದ್ಯಕೀಯ ಸೌಲ್ಯಭ ಒದಗಿಸಲಾಗುತ್ತಿದೆಯೇ ಎಂಬುದರ ಕುರಿತು ನ್ಯಾಯಾಲಯಕ್ಕೆ ವಿವರಗಳನ್ನು ಸಲ್ಲಿಸುವಂತೆ ಆದೇಶದಲ್ಲಿ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿದೆ.