ಭೋಪಾಲ್‌[ಜು.12]: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಳಿಕ ಕೊಲೆಗೈದ ವ್ಯಕ್ತಿಗೆ ಸ್ಥಳೀಯ ನ್ಯಾಯಾಲಯವೊಂದು ಕೇವಲ 32 ದಿನಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದೆ. ಪ್ರಕರಣ ಕುರಿತು ವಿಚಾರಣೆ ನಡೆಸಿದ್ದ ಇಲ್ಲಿನ ಪೋಕ್ಸೋ ಪ್ರಕರಣಗಳ ವಿಶೇಷ ನ್ಯಾಯಾಧೀಶ ಕುಮುದಿನಿ ಪಟೇಲ್‌ ಅವರು, 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಷ್ಣು ಬಮೊರಾನಿಗೆ ಮರಣದಂಡನೆ ವಿಧಿಸಿದರು. ಅಲ್ಲದೆ, ಬಾಲಕಿಯ ಅಪಹರಣ ಹಾಗೂ ಬಾಲಕಿ ಜೊತೆಗಿನ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಕಾರಣಕ್ಕಾಗಿ ಕ್ರಮವಾಗಿ 3 ವರ್ಷ ಹಾಗೂ 7 ವರ್ಷ ಜೈಲು ಶಿಕ್ಷೆ ವಿಧಿಸಿದರು.

ಮಧ್ಯಪ್ರದೇಶದ ಕಮಲಾನಗರ ಎಂಬಲ್ಲಿ ಕುಟುಂಬದ ಜೊತೆ ವಾಸವಾಗಿದ್ದ ಬಾಲಕಿ ಜೂ.8 ರಂದು ಅಂಗಡಿಗೆ ಹೋಗಿದ್ದಳು. ಆದರೆ, ಮನೆಗೆ ವಾಪಸ್‌ ಬಂದಿರಲಿಲ್ಲ. ಮಾರನೇ ದಿನ ಬೆಳಗ್ಗೆ ಚರಂಡಿಯೊಂದರಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪದ ಮೇರೆಗೆ ಜೂ.10ರಂದು ಬಮೊರಾನನ್ನು ಬಂಧಿಸಲಾಗಿತ್ತು.

27ನೇ ಗಲ್ಲು ಶಿಕ್ಷೆ: 12 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲೆ ಅತ್ಯಾಚಾರಗೈದವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನೊಂದನ್ನು ಮಧ್ಯಪ್ರದೇಶ ಸರ್ಕಾರ 2018ರ ಫೆಬ್ರುವರಿಯಲ್ಲಿ ಅಂಗೀಕರಿಸಿತ್ತು. ಬಳಿಕ ರಾಜ್ಯದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸುತ್ತಿರುವ 27ನೇ ಪ್ರಕರಣ ಇದಾಗಿದೆ.