ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ನೌಕರರ ತುಟ್ಟಿಭತ್ಯೆ (ಡಿ.ಎ.)ಹಾಗೂ ಪಿಂಚಣಿದಾರರ ತುಟ್ಟಿಪರಿಹಾರ (ಡಿ.ಆರ್‌.)ವನ್ನು ಹೆಚ್ಚುವರಿಯಾಗಿ ಶೇ.2ರಷ್ಟುಏರಿಸಲು ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ.

ಇದರಿಂದಾಗಿ 1.1 ಕೋಟಿ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಮೂಲ ವೇತನ ಮತ್ತು ಪಿಂಚಣಿಯ ಮೇಲೆ ಈಗಿರುವ ಶೇ.7ರಷ್ಟುಡಿ.ಎ ಮತ್ತು ಡಿ.ಆರ್‌.ನ ಪ್ರಮಾಣವನ್ನು ಹೆಚ್ಚುವರಿಯಾಗಿ ಶೇ.2ರಷ್ಟುಏರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ತುಟ್ಟಿಭತ್ಯೆ ಹಾಗೂ ತುಟ್ಟಿಪರಿಹಾರಗಳು 2018ರ ಜು.1ರಿಂದ ಪೂರ್ವಾನ್ವಯ ಆಗಲಿವೆ.

ಈ ನಿರ್ಧಾರದಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 6,112 ಕೋಟಿ ರು. ಹಾಗೂ 2018​-19ನೇ ಸಾಲಿನ ಹಣಕಾಸು ವರ್ಷದಲ್ಲಿ 4,074 ಕೋಟಿ ರು. ಹೊರೆ ಬೀಳಲಿದೆ. ಈ ಏರಿಕೆಯಿಂದ 48.41 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 62.03 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. 7ನೇ ವೇತನ ಆಯೋಗದ ಶಿಫಾರಸಿನ ಆಧಾರದ ಮೇಲೆ ತುಟ್ಟಿಭತ್ಯೆ ಮತ್ತು ತುಟ್ಟಿಪರಿಹಾರವನ್ನು ಏರಿಕೆ ಮಾಡಲಾಗಿದೆ ಎಂದು ಅಧಿಕೃತ ಪ್ರಟಕಣೆಯಲ್ಲಿ ತಿಳಿಸಲಾಗಿದೆ.