ಮೂಡಿಗೆರೆ :  ಅನಾ​ರೋ​ಗ್ಯ​ದಿಂದ ನಿಧ​ನ​ರಾದ ವೃದ್ಧೆ​ಯೊ​ಬ್ಬರ ಶವ​ವನ್ನು ತೆಪ್ಪದ ಮೂಲಕವೇ ಅವ​ರ ಮನೆಗೆ ಸಾಗಿ​ಸಿದ ಮನ​ಕು​ಲ​ಕುವ ಪ್ರಸಂಗ ತಾಲೂಕಿನ ಹೊಳೆಕುಡಿಗೆ ಗ್ರಾಮದಲ್ಲಿ ನಡೆ​ದಿದೆ.

ಗ್ರಾಮದ ಲಕ್ಷ್ಮ​ಮ್ಮ (70) ಎಂಬುವವರ ಮೃತ​ದೇ​ಹ​ವನ್ನು ಅಂತಿಮ​ಸಂಸ್ಕಾ​ರಕ್ಕಾಗಿ ಸ್ವಗ್ರಾ​ಮ​ಕ್ಕೆ ತೆಪ್ಪದ ಮೂಲಕ ಸಾಗಿ​ಸಲಾ​ಯಿತು. ತೀವ್ರ ಅನಾ​ರೋ​ಗ್ಯಕ್ಕೆ ತುತ್ತಾ​ಗಿದ್ದ ಲಕ್ಷ್ಮಮ್ಮ ಅವ​ರನ್ನು ಈ ಹಿಂದೆ ತೆಪ್ಪ​ದಲ್ಲೇ ಕರೆ​ದೊಯ್ದು ಮಂಗ​ಳೂ​ರಿನ ಆಸ್ಪ​ತ್ರೆಗೆ ದಾಖ​ಲಿ​ಸ​ಲಾ​ಗಿತ್ತು. ಆದರೆ, ಅವರು ಚಿಕಿತ್ಸೆ ಫಲಿ​ಸದೆ ಕೊನೆ​ಯು​ಸಿ​ರೆ​ಳೆದಿ​ದ್ದರು. ಮೃತ​ದೇ​ಹ​ವನ್ನು ಸ್ವಗ್ರಾ​ಮಕ್ಕೆ ಒಯ್ಯಲು ಸರಿ​ಯಾದ ರಸ್ತೆ ವ್ಯವಸ್ಥೆ ಇಲ್ಲ. ಹೀಗಾಗಿ, ಗ್ರಾಮ​ಸ್ಥರು ಎಲ್ಲಿಗೆ ಹೋದರೂ ಭದ್ರಾ ನದಿ ದಾಟಿ​ಕೊಂಡೇ ಹೋಗ​ಬೇಕು. ಅದೇ ರೀತಿ ಗ್ರಾಮ​ಸ್ಥರು ತೆಪ್ಪ​ದಲ್ಲೇ ವೃದ್ಧೆಯ ಮೃತ​ದೇ​ಹ​ವನ್ನು ಅವರ ಮನೆಗೆ ಸಾಗಿ​ಸಿ​ದ್ದಾರೆ.

ಕೊವೆ ಗ್ರಾಪಂ ವ್ಯಾಪ್ತಿಯಲ್ಲಿರುವ ಹೊಳೆಕೊಡಿಗೆ ಗ್ರಾಮದಲ್ಲಿ ಆದಿವಾಸಿ ಜನಾಂಗದ 6 ಕುಟುಂಬ ವಾಸಿ​ಸು​ತ್ತಿವೆ. ಈ ಗ್ರಾಮ​ಸ್ಥರು ಮಾಗುಂಡಿ ಹಾಗೂ ಬಾಳೆಹೊನ್ನೂರು ಅಥವಾ ಮೂಡಿಗೆರೆ ಹೋಗ​ಬೇ​ಕಾ​ದರೆ, ನದಿಗೆ ಸೇತುವೆ ಇಲ್ಲದ ಕಾರಣ ತೆಪ್ಪವೇ ಆಧಾ​ರ​ವಾ​ಗಿದೆ. ಗ್ರಾಮಕ್ಕೆ ರಸ್ತೆ ಇದ್ದರೂ, ಕಾಫಿ ಎಸ್ಟೇಟಿನ ಮಾಲೀಕರು ಅದನ್ನು ಒತ್ತು​ವರಿ ಮಾಡಿ​ಕೊಂಡಿ​ದ್ದಾರೆ. ಹೀಗಾಗಿ, ಗ್ರಾಮ​ಸ್ಥ​ರೆಲ್ಲ ತೆಪ್ಪದ ಮೂಲಕ ನದಿ ದಾಟಿಯೇ ತಮ್ಮ ದಿನ​ನಿ​ತ್ಯದ ಕೆಲ​ಸ​ಗ​ಳಿಗೆ ತೆರ​ಳ​ಬೇ​ಕು. ಮಳೆ​ಗಾ​ಲ​ದ​ಲ್ಲಂತೂ ಭದ್ರಾ ನದಿ ಉಕ್ಕಿ ಹರಿ​ಯು​ವು​ದ​ರಿಂದ ಗ್ರಾಮ​ಸ್ಥರು ಪ್ರಾಣ​ಭ​ಯ​ದಿಂದಲೇ ಓಡಾ​ಡುವ ಪರಿ​ಸ್ಥಿತಿ ಇದೆ.