ಬೆಂಗಳೂರು [ಜು.11] :  ನಗರದ ಕೂಕ್‌ಟೌನ್‌ನಲ್ಲಿ ಬುಧವಾರ ಸಂಭವಿಸಿದ ಕಟ್ಟಡ ದುರಂತದಲ್ಲಿ ಮೃತಪಟ್ಟವ್ಯಕ್ತಿಗಳ ಕುಟುಂಬಗಳಿಗೆ ಬಿಬಿಎಂಪಿಯಿಂದ ತಲಾ 5 ಲಕ್ಷ ರು. ಪರಿಹಾರ ನೀಡುವುದಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಘೋಷಿಸಿದ್ದಾರೆ.

ಬುಧವಾರ ಜೋಡಿ ಕಟ್ಟಡ ಕುಸಿದ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವ ಕೆ.ಜೆ.ಜಾರ್ಜ್ ಹಾಗೂ ಮೇಯರ್‌ ಗಂಗಾಂಬಿಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್‌, ಮಂಗಳವಾರ ತಡ ರಾತ್ರಿ 1.30ರ ಸುಮಾರಿಗೆ ಎರಡು ಕಟ್ಟಡಗಳು ಕುಸಿದಿವೆ. ಅಗ್ನಿಶಾಮಕದಳ, ಪೊಲೀಸರು ತಕ್ಷಣ ರಕ್ಷಣಾ ಕಾರ್ಯ ಆರಂಭಿಸಿ ಕಟ್ಟಡದಲ್ಲಿ ಸಿಲುಕಿದವರನ್ನು ರಕ್ಷಿಸಿದ್ದಾರೆ. ಕಟ್ಟಡ ಕುಸಿತಕ್ಕೆ ಕಾರಣ ಏನು ಮತ್ತು ನಿರ್ಮಾಣಕ್ಕೆ ಬಳಸಿದ ಸಾಮಗ್ರಿ ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕಟ್ಟಡ ಕುಸಿತಕ್ಕೆ ಅನಧಿಕೃತ ನಿರ್ಮಾಣವೇ ಕಾರಣವಾಗಿದೆ. ಹಾಗಾಗಿ ಅನಧಿಕೃತ ಕಟ್ಟಡಗಳ ಸಮೀಕ್ಷೆಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮೇಯರ್‌ ಗಂಗಾಂಬಿಕೆ ಮಾತನಾಡಿ, ಜೌಗು ಪ್ರದೇಶದಲ್ಲಿ ಕಟ್ಟಡ ನಿರ್ಮಿಸಿರುವುದರಿಂದ ಕಟ್ಟಡ ಕುಸಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜತೆಗೆ ಕಟ್ಟಡ ಮಾಲಿಕರು ಪಾಲಿಕೆ ಅನುಮತಿ ನೀಡಿದಕ್ಕಿಂತ ಹೆಚ್ಚಿನ ಮಹಡಿ ನಿರ್ಮಿಸಿರುವುದು, ಅಡಿಪಾಯದ ಗುಣಮಟ್ಟಕಳಪೆಯಾಗಿರುವುದು ಕಟ್ಟಡ ದುರಂತಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಕಟ್ಟಡದ ಮಾಲಿಕರು ಹಾಗೂ ಕಟ್ಟಡ ನಿರ್ಮಿಸಲು ಅನುಮತಿ ಕೊಟ್ಟಎಂಜಿನಿಯರ್‌ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಸಚಿವ ಕೆ.ಜೆ.ಜಾಜ್‌ರ್‍ ಮಾತನಾಡಿ, ಸರಿಯಾಗಿ ಪರಿಶೀಲನೆ ಮಾಡದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿರುವುದು ದುರಂತಕ್ಕೆ ಕಾರಣವಾಗಿದೆ. ಸಂಬಂಧಪಟ್ಟಎಂಜಿನಿಯರ್‌ ವಿರುದ್ಧ ಕಠಿಣಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಅನಧಿಕೃತ ಕಟ್ಟಡ ತೆರವು ಬಗ್ಗೆ ಚರ್ಚೆ

ಅನಧಿಕೃತವಾಗಿ ಕಟ್ಟಡ ನಿರ್ಮಿಸುವ ಕಟ್ಟಡ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ತ್ವರಿತವಾಗಿ ಕಟ್ಟಡ ತೆರವುಗೊಳಿಸುವ ಕುರಿತಂತೆ ಮುಂದಿನ ಮಾಸಿಕ ಸಭೆಯಲ್ಲಿ ಚರ್ಚೆ ನಡೆಸಲು ಬಿಬಿಎಂಪಿ ತೀರ್ಮಾನಿಸಿದೆ.

ಅನಧಿಕೃತ ಕಟ್ಟಡ ಮಾಲಿಕರಿಗೆ ಪಾಲಿಕೆಯಿಂದ ನೋಟಿಸ್‌ ಜಾರಿಗೊಳಿಸಿ, ತೆರವಿಗೆ ಹೋಗುವಷ್ಟರಲ್ಲಿ ಕಟ್ಟಡ ಮಾಲಿಕರು ಕಟ್ಟಡದ ಗೃಹ ಪ್ರವೇಶ ಮುಗಿಸಿರುತ್ತಾರೆ. ಇಲ್ಲವೇ ಕೋರ್ಟ್‌ನಿಂದ ಕಟ್ಟಡ ತೆರವಿಗೆ ತಡೆಯಾಜ್ಞೆ ತಂದಿರುತ್ತಾರೆ. ಹಾಗಾಗಿ, ಕಾನೂನು ಬಲಪಡಿಸುವುದು ಅವಶ್ಯಕವಾಗಿದೆ ಎಂದು ಮೇಯರ್‌ ಗಂಗಾಂಬಿಕೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಒಂದು ತಿಂಗಳ ಹಿಂದೆ ಅಷ್ಟೇ ಆದೇಶ:

ನಗರದಲ್ಲಿರುವ ಅನಧಿಕೃತ ಕಟ್ಟಡದ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಪ್ರತಿ 15 ದಿನಗಳಿಗೊಮ್ಮೆ ವರದಿ ನೀಡುವಂತೆ ಪಾಲಿಕೆಯ ಎಲ್ಲ ವಲಯದ ಮುಖ್ಯ ಎಂಜಿಯರ್‌ಗೆ ಬಿಬಿಎಂಪಿ ಆಯುಕ್ತರು ಜೂ.6ರಂದು ಆದೇಶಿಸಿದ್ದರು. ಆದರೆ, ಅಧಿಕಾರಿಗಳು ಬೇಜವಾಬ್ದಾರಿಯಿಂದ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.