ಪೊಲೀಸರು ಹಾಗೂ ಗುಪ್ತಚರ ಸಂಸ್ಥೆಗಳು ಹದ್ದಿನಗಣ್ಣಿಟ್ಟಿದ್ದರೂ ದೇಶದ ‘ಮೋಸ್ಟ್ ವಾಂಟೆಡ್ ಭಯೋತ್ಪಾದಕ’ ದಾವೂದ್ ಇಬ್ರಾಹಿಂ ಪತ್ನಿ ಮೆಹಜಬೀನ್ ಶೇಖ್ ಕಳೆದ ವರ್ಷ ಸದ್ದಿಲ್ಲದೇ ಭಾರತಕ್ಕೆ ಬಂದು, ತನ್ನ ತಂದೆಯನ್ನು ಭೇಟಿ ಮಾಡಿ ವಾಪಸ್ ಹೋಗಿರುವ ಸ್ಫೋಟಕ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.
ಮುಂಬೈ: ಪೊಲೀಸರು ಹಾಗೂ ಗುಪ್ತಚರ ಸಂಸ್ಥೆಗಳು ಹದ್ದಿನಗಣ್ಣಿಟ್ಟಿದ್ದರೂ ದೇಶದ ‘ಮೋಸ್ಟ್ ವಾಂಟೆಡ್ ಭಯೋತ್ಪಾದಕ’ ದಾವೂದ್ ಇಬ್ರಾಹಿಂ ಪತ್ನಿ ಮೆಹಜಬೀನ್ ಶೇಖ್ ಕಳೆದ ವರ್ಷ ಸದ್ದಿಲ್ಲದೇ ಭಾರತಕ್ಕೆ ಬಂದು, ತನ್ನ ತಂದೆಯನ್ನು ಭೇಟಿ ಮಾಡಿ ವಾಪಸ್ ಹೋಗಿರುವ ಸ್ಫೋಟಕ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.
ಸುಲಿಗೆ ಪ್ರಕರಣವೊಂದರ ಸಂಬಂಧ ದಾವೂದ್ ಸೋದರ ಇಕ್ಬಾಲ್ ಕಸ್ಕರ್‌ನನ್ನು ಬಂಧಿಸಿರುವ ಪೊಲೀಸರು, ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಮಾಹಿತಿ ತಿಳಿದುಬಂದಿದೆ.
ದಾವೂದ್ ಪತ್ನಿ ಮೆಹಜಬೀನ್ ಶೇಖ್ ಅಲಿಯಾಸ್ ಜುಬೀನಾ ಜರೀನ್ ಕಳೆದ ವರ್ಷ ಮುಂಬೈಗೆ ಬಂದಿದ್ದಳು. ಮುಂಬೈನಲ್ಲಿ ಕುಟುಂಬ ಸಮೇತ ವಾಸಿಸುತ್ತಿರುವ ತನ್ನ ತಂದೆ ಸಲೀಂ ಕಾಶ್ಮೀರಿಯನ್ನು ಭೇಟಿ ಮಾಡಿದ್ದಳು. ಕುಟುಂಬ ಸದಸ್ಯರ ಜತೆಗೂ ಇದ್ದಳು. ಬಳಿಕ ರಹಸ್ಯವಾಗಿ ದೇಶದಿಂದ ವಾಪಸ್ ಹೋದಳು ಎಂದು ಆತ ಹೇಳಿದ್ದಾನೆ.
ದಾವೂದ್ ಹಾಗೂ ಆತನ ಪರಿವಾರದ ಚಲನವಲನಗಳ ಮೇಲೆ ಬೇಹುಗಾರಿಕಾ ಸಂಸ್ಥೆಗಳು ತೀವ್ರ ನಿಗಾ ಇಟ್ಟಿರುವ ಹೊರತಾಗಿಯೂ ನಡೆದಿರುವ ಈ ಬೆಳವಣಿಗೆ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಮುಂಬೈ ಪೊಲೀಸರು ದಾವೂದ್ ಕುಟುಂಬ ಸದಸ್ಯರ ಮೇಲೆ ಹದ್ದಿನಗಣ್ಣು ಇಟ್ಟಿದ್ದಾರೆ. ಅವರೆಲ್ಲರ ಕಣ್ತಪ್ಪಿಸಿ ಮೆಹಜಬೀನ್ ಮುಂಬೈಗೆ ಬಂದು ಹೋಗಿರುವುದು ಭಾರಿ ಅಚ್ಚರಿ ಮೂಡಿಸಿದೆ.
