ಲಂಡನ್‌ [ಜು.03] : ‘ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ’ ದಾವೂದ್‌ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ ಎಂಬ ಭಾರತದ ವಾದವನ್ನು ದಶಕಗಳಿಂದಲೂ ನಿರಾಕರಿಸುತ್ತಲೇ ಬಂದಿರುವ ಪಾಕಿಸ್ತಾನದ ಮಾನ ಬ್ರಿಟನ್‌ನಲ್ಲಿ ಹರಾಜಾಗಿದೆ. ದಾವೂದ್‌ ಹಾಗೂ ಆತನ ಅಂತಾರಾಷ್ಟ್ರೀಯ ಅಪರಾಧ ಜಾಲವಾಗಿರುವ ‘ಡಿ-ಕಂಪನಿ’ ಪಾಕಿಸ್ತಾನದ ಕರಾಚಿಯಲ್ಲೇ ಕಾರ್ಯನಿರ್ವಹಿಸುತ್ತಿದೆ ಎಂದು ಬ್ರಿಟನ್‌ ನ್ಯಾಯಾಲಯಕ್ಕೆ ಅಮೆರಿಕ ತಿಳಿಸಿದೆ.

ಡಿ- ಕಂಪನಿಯ ಮುಖ್ಯಸ್ಥ ದಾವೂದ್‌ ಇಬ್ರಾಹಿಂ. ಆತನೊಬ್ಬ ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಭಾರತೀಯ ಮುಸ್ಲಿಂ ವ್ಯಕ್ತಿ. ಆತ ಹಾಗೂ ಆತನ ಸೋದರ 1993ರ (ಮುಂಬೈ ಸರಣಿ ಸ್ಫೋಟ) ಬಳಿಕ ಭಾರತದಿಂದ ತಲೆಮರೆಸಿಕೊಂಡಿದ್ದಾರೆ. ಕಳೆದ 10 ವರ್ಷಗಳಿಂದ ಡಿ- ಕಂಪನಿಗೆ ಸೇರಿದವರು ಅಮೆರಿಕದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ, ಸುಲಿಗೆ ಇವರ ಕಸುಬಾಗಿದೆ ಎಂದು ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯಕ್ಕೆ ಅಮೆರಿಕದ ವಕೀಲರು ತಿಳಿಸಿದ್ದಾರೆ.

ಸುಲಿಗೆ, ಬ್ಲ್ಯಾಕ್‌ಮೇಲ್‌, ಮಾದಕ ವಸ್ತು ಕಳ್ಳ ಸಾಗಣೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಡಿ- ಕಂಪನಿಗೆ ಸೇರಿದ ಜಬೀರ್‌ ಮೋತಿ (51) ಎಂಬಾತ ಅಮೆರಿಕಕ್ಕೆ ಬೇಕಾಗಿದ್ದಾನೆ. ಪಾಕಿಸ್ತಾನ ಮೂಲದ ಜಬೀರ್‌ ಮೋತಿಯನ್ನು ಅಮೆರಿಕದ ಕೋರಿಕೆ ಮೇರೆಗೆ ಕಳೆದ ವಾರ ಬಂಧಿಸಲಾಗಿತ್ತು. ಆತನ ಗಡೀಪಾರಿಗೆ ಅಮೆರಿಕ ಕೋರಿಕೆ ಇಟ್ಟಿದ್ದು, ಅದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆ ವೇಳೆ ದಾವೂದ್‌ ಕರಾಚಿಯಲ್ಲಿರುವ ಸಂಗತಿಯನ್ನು ಅಮೆರಿಕ ತಿಳಿಸಿದೆ.

ಜಬೀನ್‌ ಮೋತಿಯು ದಾವೂದ್‌ಗೆ ನೇರ ವರದಿ ಮಾಡಿಕೊಳ್ಳುತ್ತಾನೆ. ಸುಲಿಗೆ, ಸಾಲದ ಹಣ ವಸೂಲಿ ಹಾಗೂ ಅಕ್ರಮ ಹಣ ವರ್ಗಾವಣೆ ಈತನ ಮೂಲ ಕೆಲಸಗಳಾಗಿವೆ ಎಂದು ಅಮೆರಿಕ ಪರ ವಕೀಲರಾಗಿರುವ ಜಾನ್‌ ಹಾರ್ಡಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

1993ರ ಮುಂಬೈ ಸರಣಿ ಸ್ಫೋಟ ಪ್ರಕರಣ ಸಂಬಂಧ ಭಾರತಕ್ಕೆ ದಾವೂದ್‌ ಇಬ್ರಾಹಿಂ ಬೇಕಾಗಿದ್ದಾನೆ. ಆತ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಪ್ರತಿಪಾದಿಸಿಕೊಂಡು ಬಂದಿದೆ. ಆದರೆ ಪಾಕಿಸ್ತಾನ ಇದನ್ನು ನಿರಾಕರಿಸುತ್ತಲೇ ಇದೆ. 2015ರಲ್ಲಿ ಭಾರತ ದಾವೂದ್‌ನ ದೂರವಾಣಿ ಬಿಲ್‌ ಹಾಗೂ ಪಾಕಿಸ್ತಾನದ ಪಾಸ್‌ಪೋರ್ಟ್‌ ಅನ್ನು ಸಾಕ್ಷ್ಯವಾಗಿ ನೀಡಿತ್ತು. ದಾವೂದ್‌ ಹಾಗೂ ಆತನ ಕುಟುಂಬ ಪಾಕಿಸ್ತಾನದಲ್ಲೇ ಇದೆ ಎಂದು ಹೇಳಿತ್ತು. ದಾವೂದ್‌ ನಿವಾಸದ ವಿಳಾಸವನ್ನೂ ನೀಡಿತ್ತು.