ದಾವಣಗೆರೆ :  ಚಿತ್ರದುರ್ಗ-ದಾವಣಗೆರೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸರ್ವೀಸ್ ರಸ್ತೆ, ಅಂಡರ್‌ ಪಾಸ್‌ ನಿರ್ಮಾಣ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೇ ಧೋರಣೆ ಮುಂದುವರಿಸಿದಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಬೀದಿಗಿಳಿದು ಹೋರಾಟ ನಡೆಸಬೇಕಾದೀತು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಗುಟುರು ಹಾಕಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಎನ್‌ಎಚ್‌ಎಐ ಹಾಗೂ ವಿವಿಧ ಗ್ರಾಮಸ್ಥರ ಸಭೆಯಲ್ಲಿ ಸಂಸದರು ಮಾತನಾಡಿದರು.

ಸರ್ವೀಸ್ ರಸ್ತೆ, ಅಂಡರ್‌ ಬ್ರಿಡ್ಜ್‌ ಕಾಮಗಾರಿ ಮೊದಲು ಆಗಬೇಕು. ಹೆದ್ದಾರಿ ಪ್ರಾಧಿಕಾರ ಇದೇ ರೀತಿ ಮಂದಗತಿಯ ಕಾಮಗಾರಿ ಮುಂದುವರಿಸಿದರೆ ನಾನಂತೂ ನೋಡಿಕೊಂಡು ಸುಮ್ಮನಿರುವುದಿಲ್ಲ. ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಸರ್ವೀಸ್ ರಸ್ತೆ, ಬ್ರಿಡ್ಜ್‌ಗಳನ್ನು ನಿರ್ಮಿಸದ ಹೊರತು 6 ಪಥದ ಹೆದ್ದಾರಿ ನಿರ್ಮಾಣ ಕಾಮಗಾರಿ ಮಾಡಲೇಬೇಡಿ. ಇವು ಆಗದ ಹೊರತು ಹೆದ್ದಾರಿ ನಿರ್ಮಾಣ ಮಾಡದಂತೆ ತಡೆಯಲು ರೈತರಿಗೂ ಹೇಳಲಾಗಿದೆ ಎಂದು ನುಡಿದರು.

ಹೆದ್ದಾರಿ ಪ್ರಾಧಿಕಾರ ಹಟಕ್ಕೆ ಬಿದ್ದು ಪೊಲೀಸ್‌ ಬಂದೋ ಬಸ್ತ್ ನಲ್ಲಿ ಕಾಮಗಾರಿ ಕೈಗೊಳ್ಳಲು ಮುಂದಾಗಿದ್ದೇ ಆದಲ್ಲಿ ಆಯಾ ಗ್ರಾಮಸ್ಥರು, ರೈತರು ಹೀಗೆ ಎಲ್ಲರಿಗಿಂತಲೂ ಮುಂದೆ ನಿಂತು, ನಾನೇ ಪ್ರತಿಭಟಿಸುತ್ತೇನೆ. ಅಗತ್ಯ ಬಿದ್ದರೆ ಒಳ್ಳೆಯ ಕೆಲಸಕ್ಕಾಗಿ, ಹೆದ್ದಾರಿಗೆ ಹೊಂದಿಕೊಂಡಿರುವ ಗ್ರಾಮಸ್ಥರ ಒಳಿತಿಗಾಗಿ ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡುವುದಕ್ಕೂ ನಾನು ಹಿಂಜರಿಯುವವನಲ್ಲ ಎಂದು ಪುನರುಚ್ಚರಿಸಿದರು.

ಆರು ಪಥದ ರಸ್ತೆಯಾಗುವವರೆಗೂ ಟೋಲ್‌ಗಳಲ್ಲಿ ಹೊಸ ಶುಲ್ಕವನ್ನು ಪಡೆಯುವಂತಿಲ್ಲ. ಸಂಪೂರ್ಣವಾಗಿ ರಸ್ತೆ ಕಾಮಗಾರಿ ಮುಗಿದ ಬಳಿಕವೇ ಹೊಸ ಶುಲ್ಕ ಪಡೆಯಬೇಕು. ಈ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳು ಸಂಬಂಧಿಸಿದವರಿಗೆ ಸ್ಪಷ್ಟನಿರ್ದೇಶನ ನೀಡಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಮ್ಮ ಮನಸ್ಸಿಗೆ ತೋಚಿದಂತೆ ಕೆಲಸ ಮಾಡುವುದಲ್ಲ. ಆಯಾ ಗ್ರಾಮಗಳ ಜನರಿಗೆ ಸಮಸ್ಯೆಯಾಗದಂತೆ ಸವೀರ್‍ಸ್‌ ರಸ್ತೆ, ಸೇತುವೆ ನಿರ್ಮಿಸಿ, 6 ಪಥದ ಕಾಮಗಾರಿ ಕೈಗೊಳ್ಳಲಿ ಎಂದು ಸಂಸದರು ತಾಕೀತು ಮಾಡಿದರು.