ದರ್ಶನ್ ಜತೆ ನಟಿಸಿದ್ದ ನಟಿ ಲೋಕಸಭಾ ಸಂಸದೆ
ನಟ ದರ್ಶನ್ ಜೊತೆ ಚಿತ್ರದಲ್ಲಿ ನಟಿಸಿದ್ದ ನಟಿಯೋರ್ವರು ಇದೀಗ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಮುಂಬೈ: ಕನ್ನಡದ ಖ್ಯಾತ ನಟ ದರ್ಶನ್ ಅವರ ಜೊತೆ ‘ದರ್ಶನ್’ ಚಿತ್ರದಲ್ಲಿ ನಟಿಸಿದ್ದ ನಟಿ ನವನೀತ್ ಕೌರ್ ರಾಣಾ ಇದೀಗ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಹೌದು, ಯುವ ಸ್ವಾಭಿಮಾನ ಪಕ್ಷದ ಅಭ್ಯರ್ಥಿಯಾಗಿ ಅಮರಾವತಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನವನೀತ್ ಅಚ್ಚರಿಯ ರೀತಿಯಲ್ಲಿ ಗೆಲುವು ಸಾಧಿಸಿದ್ದಾರೆ. ನವನೀತ್, 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶಿವಸೇನೆಯ ಆನಂದ್‌ರಾವ್ ಅವರನ್ನು 36000 ಮತಗಳಿಂದ ಸೋಲಿಸಿದ್ದಾರೆ.
ನವನೀತ್ ಅವರ ಪತಿ ರವಿ ರಾಣಾ ಅಮರಾವತಿ ಕ್ಷೇತ್ರದಲ್ಲಿ ವಿಧಾನಸಭಾ ಸದಸ್ಯರಾಗಿದ್ದಾರೆ. ಅವರೇ ಸ್ಥಾಪಿಸಿರುವ ಪಕ್ಷದಿಂದ ಕಳೆದ ಬಾರಿ ಕೂಡಾ ನವನೀತ್ ಸ್ಪರ್ಧಿಸಿದ್ದರಾದರೂ, 1.36 ಲಕ್ಷ ಮತಗಳ ಅಂತರದಿಂದ ಸೋತಿದ್ದರು. ಆದರೆ ಈ ಬಾರಿ ಕಾಂಗ್ರೆಸ್ ಮತ್ತು ಎನ್‌ಸಿಪಿಯ ಮೈತ್ರಿಕೂಟದ ಬೆಂಬಲದೊಂದಿಗೆ ನವನೀತ್ ಕಣಕ್ಕೆ ಇಳಿದು ಗೆಲುವು ಸಾಧಿಸಿದ್ದಾರೆ.
ಮುಂಬೈನಲ್ಲಿ ಜನಿಸಿದ ನವನೀತ್ ಕೌರ್ ತಂದೆ-ತಾಯಿ ಪಂಜಾಬ್ ಮೂಲದವರಾಗಿದ್ದು, ತಂದೆ ಸೇನಾಧಿಕಾರಿಯಾಗಿದ್ದರು. ಪಿಯುಸಿ ಅಧ್ಯಯನ ಅರ್ಧಕ್ಕೆ ಕೈಬಿಟ್ಟು ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಿ, ನಂತರ ಕನ್ನಡ, ತೆಲುಗು, ಮಲಯಾಳಿ, ಹಿಂದಿ ಮತ್ತು ಪಂಜಾಬಿ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.