ಬೆಂಗಳೂರಿನಲ್ಲಿ ಬಲಿಗಾಗಿ ಕಾಯುತ್ತಿವೆ 27 ಡೇಂಜರ್ಸ್ ಜೋನ್ಸ್

Danger Jones in Bengaluru
Highlights

ಸಾಧಾರಣ ಮಳೆಯಾದರೂ ದ್ವೀಪದಂತಾಗುವ ಬೆಂಗಳೂರಿನಲ್ಲಿ ೫ ವರ್ಷದಲ್ಲಿ ಮಳೆ ಅಬ್ಬರಕ್ಕೆ 11 ಜೀವಗಳು ಬಲಿಯಾಗಿವೆ. ಇದೀಗ ಮುಂಗಾರು ಮಳೆ ರಾಜಧಾನಿ ಪ್ರವೇಶಕ್ಕೆ ಸಜ್ಜಾಗಿರುವ ಹೊತ್ತಿನಲ್ಲೇ ಬಿಬಿಎಂಪಿಯು ಪ್ರವಾಹದ ಅವಾಂತರ ಸೃಷ್ಟಿಸಬಲ್ಲ 27 ‘ಡೇಂಜರ್ ವಲಯಗಳ’ ಗುರುತಿಸಿದೆ.

ಬೆಂಗಳೂರು (ಜೂ. 03): ಸಾಧಾರಣ ಮಳೆಯಾದರೂ ದ್ವೀಪದಂತಾಗುವ ಬೆಂಗಳೂರಿನಲ್ಲಿ ೫ ವರ್ಷದಲ್ಲಿ ಮಳೆ ಅಬ್ಬರಕ್ಕೆ 11 ಜೀವಗಳು ಬಲಿಯಾಗಿವೆ. ಇದೀಗ ಮುಂಗಾರು ಮಳೆ ರಾಜಧಾನಿ ಪ್ರವೇಶಕ್ಕೆ ಸಜ್ಜಾಗಿರುವ ಹೊತ್ತಿನಲ್ಲೇ ಬಿಬಿಎಂಪಿಯು ಪ್ರವಾಹದ ಅವಾಂತರ ಸೃಷ್ಟಿಸಬಲ್ಲ 27 ‘ಡೇಂಜರ್ ವಲಯಗಳ’ ಗುರುತಿಸಿದೆ.

ನಗರದ 27 ಕಡೆ ಪ್ರವಾಹ ಭೀತಿ ಸೃಷ್ಟಿಯಾಗುವ ಆತಂಕವನ್ನು ಸ್ವತಃ ಬಿಬಿಎಂಪಿಯೇ ವ್ಯಕ್ತಪಡಿಸಿದೆ. ಹೀಗಾಗಿ ಅಮಾಯಕ ಜೀವಗಳು ಈ ಬಾರಿಯೂ ರಾಜಕಾಲುವೆ ಹಾಗೂ ಮಳೆ ನೀರು ಚರಂಡಿ ಪಾಲಾಗುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪರೋಕ್ಷ ಎಚ್ಚರಿಕೆ ರವಾನಿಸಿದೆ. ಈಗಾಗಲೇ ಪ್ರಸಕ್ತ ಸಾಲಿನ ಜನವರಿಯಲ್ಲಿ ಸುರಿದ ಸಾಧಾರಣ ಮಳೆಗೆ ದೊಡ್ಡಬೊಮ್ಮಸಂದ್ರದಲ್ಲಿ ತನುಶ್ರೀ ಎಂಬ ಎರಡೂವರೆ ವರ್ಷದ ಪುಟ್ಟ ಮಗು(2018 ಜ.9) ಕೊಚ್ಚಿಕೊಂಡು ಹೋಗಿದ್ದು, ಪ್ರಸಕ್ತ ಸಾಲಿನ ಮಳೆ ಅನಾಹುತಗಳ ಬಗ್ಗೆ ಎಚ್ಚರಿಕೆಯ ಘಂಟೆಯಾಗಿದೆ.

ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಮಕ್ಕಳ ಬಲಿ

ನಗರದಲ್ಲಿ ಒಟ್ಟಾರೆ 842 ಕಿ.ಮೀ. ಉದ್ದದ ರಾಜಕಾಲುವೆಗಳಿವೆ. ಇದರಲ್ಲಿ 335 ಕಿ.ಮೀ. ಉದ್ದದ ರಾಜಕಾಲುವೆಗೆ ಮಾತ್ರ ತಡೆಗೋಡೆ ನಿರ್ಮಾಣವಾಗಿದೆ. ಉಳಿದಂತೆ 842 ಕಿ.ಮೀ. ಉದ್ದದ 195 ಕಿ.ಮೀ. ಉದ್ದದ ಕಾಲುವೆ ಮಾತ್ರ ತಂತಿ ಬೇಲಿ ಅಳವಡಿಕೆ ಮಾಡಲಾಗಿದೆ.

2009 ರ ಸೆ.17 ರಲ್ಲಿ ಪುಟ್ಟ ಮಗು (ವಿಜಯ್) ಕಾಲುವೆಯಲ್ಲಿ ಕೊಚ್ಚಿ ಹೋಗಿತ್ತು. ಈ ವೇಳೆ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಮೂರು ವರ್ಷದಲ್ಲಿ 800 ಕಿ.ಮೀ. ರಾಜಕಾಲುವೆಗೂ ತಂತಿಬೇಲಿ ಅಳವಡಿಕೆ ಮಾಡುವುದಾಗಿ ಹೇಳಿದ್ದರು. ಆದರೆ, ಈ ಬಗ್ಗೆ ಬಿಬಿಎಂಪಿ ವಹಿಸಿದ ನಿರ್ಲಕ್ಷ್ಯದ ಫಲವಾಗಿ ಕಾಲುವೆಗಳಿಗೆ ಮಕ್ಕಳ ಬಲಿ ನಿರಂತರವಾಗಿ ಮುಂದುವರಿದಿದೆ.

10 ವರ್ಷದಲ್ಲಿ 16 ಬಲಿ

ಇದೀಗ ಪ್ರಸ್ತುತ ವರ್ಷವೂ 27 ಸ್ಥಳಗಳಲ್ಲಿ ರಾಜಕಾಲುವೆಗಳು ಬಲಿಗಾಗಿ ಕಾಯುತ್ತಿವೆ ಎಂದು ಸ್ವತಃ ಬಿಬಿಎಂಪಿಯೇ ಒಪ್ಪಿಕೊಂಡಿದೆ. ಕಾಮಗಾರಿ ಹೆಸರಿನಲ್ಲಿ ಪ್ರತಿ ವರ್ಷ ಪಾಲಿಕೆ ಕೋಟ್ಯಂತರ ರು. ನೀರುಪಾಲು ಮಾಡುತ್ತಿದೆ. ಆದರೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಮಾತ್ರ ಕಾಣುತ್ತಿಲ್ಲ. ಪರಿಣಾಮ ವರ್ಷದಿಂದ ವರ್ಷಕ್ಕೆ ಮಳೆ ಅನಾಹುತಗಳಿಗೆ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಹತ್ತು ವರ್ಷದಲ್ಲಿ 16 ಮಂದಿ ಬಲಿಯಾಗಿರುವುದೇ ಸಾಕ್ಷಿ.

ಬಿಬಿಎಂಪಿ ಮಾಹಿತಿ ಪ್ರಕಾರ ಈ ಬಾರಿಯೂ ಮಳೆಯಾದರೆ 27 ಸ್ಥಳದಲ್ಲಿ ಪ್ರವಾಹ ಹಾನಿ ಉಂಟಾಗಲಿದೆ. ಇದಕ್ಕೆ ಕಾರಣಗಳನ್ನೂ ಮೆಲಕು ಹಾಕಿದ್ದು ನಗರದಲ್ಲಿ ಕೆರೆಗಳು ಪರಸ್ಪರ ಸಂಪರ್ಕ ಹೊಂದಿವೆ. ಕೆರೆಯಿಂದ ಕೆರೆಗೆ ಹರಿಯುವ ಮಳೆ ನೀರು ಕಾಲುವೆಗಳು ಹಲವು ಕಡೆಗಳಲ್ಲಿ ಒತ್ತುವರಿಗೆ ಗುರಿಯಾಗಿವೆ. ಕೆಲವು ಕಡೆ ಒತ್ತುವರಿಯಿಂದಾಗಿ ಕಾಲುವೆ ಕಿರಿದು ಮಾಡಲಾಗಿದೆ. ಕೆಲವು ಕಡೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಈ ಎಲ್ಲಾ ಕಾರಣಗಳಿಂದಾಗಿ ಅಂತಹ ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಚ್ಚುತ್ತಿವೆ ಡೇಂಜರ್ ವಲಯ:
ಬಿಬಿಎಂಪಿಯು ಮಳೆ ನೀರುಗಾಲುವೆ ಬಗ್ಗೆ ಸಿದ್ಧಪಡಿಸಿರುವ ವಿಸ್ತೃತ ಯೋಜನಾ ವರದಿಯಲ್ಲಿ ೧೪೭ ಪ್ರವಾಹ ಪೀಡಿತ ಪ್ರದೇಶ ಮಾತ್ರ ಗುರುತಿಸಲಾಗಿತ್ತು. ಬಳಿಕ ನಡೆಸಿದ ಸರ್ವೆಗಳಲ್ಲಿ ಡೇಂಜರ್ ಜೋನ್‌ಗಳ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆ. 2015 ರಲ್ಲಿ ಹೊಸದಾಗಿ 77, 2016 ರಲ್ಲಿ 75 ಪ್ರವಾಹ ಪೀಡಿತ ಪ್ರದೇಶ ಪತ್ತೆಯಾಗಿದ್ದು, ಒಟ್ಟು ಸಂಖ್ಯೆ 299 ಕ್ಕೇರಿದೆ. ಈ ಸಂಖ್ಯೆ 2018 ರ ಮೇ ವೇಳೆಗೆ 366 ಕ್ಕೆ ಮುಟ್ಟಿತ್ತು.

ಇವುಗಳ ಪೈಕಿ 243 ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಸಮರ್ಥನೆ ನೀಡಿದ್ದಾರೆ. ಉಳಿದಂತೆ 96 ಕಡೆ ಕಾಮಗಾರಿ ಪ್ರಗತಿಯಲ್ಲಿವೆ ಎಂದೂ ಹೇಳುತ್ತಾರೆ. ಆದರೆ, ಕಾಮಗಾರಿ ಪ್ರಗತಿಯಲ್ಲಿರುವ ಸ್ಥಳದಲ್ಲೂ ಪ್ರವಾಹ ಭೀತಿ ತಪ್ಪಿದ್ದಲ್ಲ ಎಂಬುದು ನಗರ ತಜ್ಞರ ಮಾತು. ಪ್ರಸ್ತುತ ಬಾಕಿ ಉಳಿದಿರುವ 27 ಡೇಂಜರ್ ಜೋನ್‌ಗಳ ಅಭಿವೃದ್ಧಿಗೂ ಕ್ರಮ ಕೈಗೊಂಡಿದ್ದೇವೆ. ಈ ಭಾಗದಲ್ಲಿ ನಡೆಸಬೇಕಾಗಿರುವ 163 ಕಾಮಗಾರಿಗಳ ಬಗ್ಗೆ ನಗರೋತ್ಥಾನ ಅನುದಾನದಕ್ಕಾಗಿ ಮನವಿಯನ್ನೂ ಸಲ್ಲಿಸಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. 

-ವಿಶ್ವನಾಥ ಮಲೆಬೆನ್ನೂರು 

loader