ಧಾರವಾಡ (ಅ.06): ಭಾರತೀಯ ಪತ್ರಿಕೋದ್ಯಮ ವೃತ್ತಿ ಕ್ಷೇತ್ರದಲ್ಲೂ ದಲಿತರ ಪ್ರತಿನಿಧಿಸುವಿಕೆ ಇಂದಿಗೂ ಬೆರಳಣಿಕೆ ಯಷ್ಟಿದೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ ಅಮೀನ್ ಮಟ್ಟು ಹೇಳಿದರು.

ಕರ್ನಾಟಕ ವಿವಿಯ ಡಾ. ಅಂಬೇಡ್ಕರ್‌ ಅಧ್ಯಯನ ವಿಭಾಗ ಮತ್ತು ಸೇರಾ ಜೇ ಮೋನಾಸ್ಟಿಕ್‌ ವಿವಿ ಜಂಟಿಯಾಗಿ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಬುಧವಾರ ಮಾಧ್ಯಮ ಮತ್ತು ದಲಿತರು, ದಲಿತರ ಸಂಘಟನೆಯಲ್ಲಿ ಮಾಧ್ಯಮ ಕುರಿತು ಮಾತನಾಡಿದ ಮಟ್ಟು, ಭಾರತೀಯ ಪತ್ರಿಕೋದ್ಯಮ ಅವಲೋಕಿಸಿದಾಗ ದಲಿತ ಪತ್ರಕರ್ತರ ಸಂಖ್ಯೆ ವಿರಳ. ಆದರೆ, ಪ್ರಸ್ತುತ ಮಾಧ್ಯಮ ಅಗಾಧವಾಗಿ ಬೆಳೆದಿದ್ದು, ಇಂದಿಗೂ ದಲಿತರ ಪ್ರತಿನಿಧಿಸುವಿಕೆ ಹೆಚ್ಚಾಗಿಲ್ಲ ಎಂದು ತಿಳಿಸಿದರು.

ಹಿಂದುಳಿದ, ಅಲ್ಪಸಂಖ್ಯಾತರ, ಮತ್ತು ದಲಿತ ಪತ್ರಕರ್ತರು ಇಲ್ಲದಿರುವುದು ವಸ್ತುಸ್ಥಿತಿಗೆ ಹಿಡಿದ ಕೈಗನ್ನಡಿ ಆಗಿದೆ. ಜಗತ್ತಿನಲ್ಲಿ ಭಾರತೀಯ ಪತ್ರಿಕೋದ್ಯಮದಲ್ಲಿ ದಲಿತರ ಪ್ರತಿನಿಧಿಸುವಿಕೆ ಕುರಿತು 1996ರಲ್ಲಿ ವಾಷಿಂಗಟನ್‌ ಟೈಮ್ಸ್‌ ಪತ್ರಿಕೆಯ ಸಂಪಾದಕ ಕೆನಟ್‌ ಕೂಪರ್‌ ಅನೇಕ ರೀತಿಯಲ್ಲಿ ಅಧ್ಯಯನ ನಡೆಸಿದರು. ಅಲ್ಲದೆ, ಸಿಎನ್‌ಸಿಎಸ್‌ ಎಂಬ ಸ್ವಾಯತ್ತ ಸಂಸ್ಥೆ ಭಾರತದಲ್ಲಿ ದಲಿತರ ಕುರಿತು ಸಮೀಕ್ಷೆ ನಡೆಸಿದೆ ಎಂದರು.

ಕನ್ನಡದಂತಹ ಪ್ರಾದೇಶಿಕ ಪತ್ರಿಕೋದ್ಯಮದಲ್ಲಿಯೂ ಅದೇ ಸ್ಥಿತಿ ಇದೆ. ಅನೇಕ ವಿಶ್ವವಿದ್ಯಾಲಯಗಳಲ್ಲಿ ದಲಿತ ವಿದ್ಯಾರ್ಥಿಗಳು ಪತ್ರಿಕೋದ್ಯಮವನ್ನು ಅಧ್ಯಯನ ಮಾಡುತ್ತಿದ್ದಾರೆ. ಆದರೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ. ಅಮೆರಿಕದ ಪತ್ರಕೋದ್ಯಮ ಅವಲೋಕಿಸದರೆ 1978ರಲ್ಲಿ ಅಮೆರಿಕದ ಪತ್ರಕರ್ತ ಸಂಘಟನೆ ನಡೆಸಿದ ಅಧ್ಯಯನದ ಪ್ರಕಾರ ಅಮೆರಿಕದ ಪತ್ರಿಕೋದ್ಯಮದಲ್ಲಿ ಕೇವಲ ಶೇ. 4ರಷ್ಟುಕಪ್ಪು ಜನರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಮಾತ್ರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಇದ್ದಾರೆ. ಆದರೆ, 2000ನೇ ಸಾಲಿನಲ್ಲಿ ಅದು ಶೇ. 20ರಷ್ಟುಹೆಚ್ಚಾಗಿದ್ದು, 2010ರಲ್ಲಿ ಅದು ಶೇ. 40ರಷ್ಟುಪತ್ರಿಕೋದ್ಯಮದಲ್ಲಿ ಕಪ್ಪುಜನರ ಪ್ರತಿನಿಧಿಸುವಿಕೆ ಹೆಚ್ಚಾಗಿದೆ ಎಂದರು.

ಪ್ರಸ್ತುತ ಮಾಧ್ಯಮದಲ್ಲಿ ಕೇವಲ ಸಿನಿಮಾ ರಾಜಕಾರಣದಂತಹ ರಂಜನೀಯ ವರದಿಗಳಿಗೆ ಹೆಚ್ಚು ಪ್ರಾಮುಖ್ಯ ನೀಡುತ್ತಿದ್ದು, ಸಮಾಜಕ್ಕೆ ಪೂರಕವಾದ ವರದಿಗಳಿಗೆ ಹೆಚ್ಚು ಮಹತ್ವ ನೀಡುತ್ತಿಲ್ಲ. ದಲಿತರು ಪತ್ರಿಕಾ ಮಾಧ್ಯಮದಲ್ಲಿ ಇರುವುದರಿಂದ ದಲಿತರ ಮೇಲೆ ಆಗುವ ದೌರ್ಜನ್ಯ ಅರ್ಥವಾಗಬಲ್ಲದು, ದಲಿತೇತರ ಪತ್ರಕರ್ತನಿಗೆ ಅದು ಕೇವಲ ಅಪರಾಧ ಸುದ್ದಿಗೆ ಮಾತ್ರ ಸಿಮೀತವಾಗುತ್ತದೆ. ಆದ್ದರಿಂದ ದಲಿತ ಯುವಜನಾಂಗ ಪತ್ರಿಕೋದ್ಯಮ ಕ್ಷೇತ್ರಕ್ಕೆ ಧುಮಕಬೇಕು ಎಂದರು. 

ಅಧಿಕ ಶೋಷಣೆ:

ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ಅಧಿಕ ಶೋಷಣೆಗಳು ನಡೆಯುತ್ತಿವೆ. ಕ್ರೈಮ್‌ ಬ್ಯುರೋ ಆಫ್‌ ಇಂಡಿಯಾದ ಒಂದು ಅಂದಾಜಿನ ಪ್ರಕಾರ ದಲಿತರ ಮೇಲೆ ಪ್ರತಿದಿನ 16 ನಿಮಿಷಕ್ಕೆ ಶೋಷಣೆ ಪ್ರತಿ 4 ನಿಮಿಷಕ್ಕೊಮ್ಮೆ ದಲಿತ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಪ್ರತಿ ನಾಲ್ಕು ನಿಮಿಷಕ್ಕೆ ಒಮ್ಮೆ ದಲಿತರ ಕೊಲೆ ನಡೆಯುತ್ತಿದೆ. ನಿರ್ಭಯಾ ಮೇಲೆ ಅತ್ಯಾಚಾರವಾದಾಗ ಮಾಧ್ಯಮಗಳು ಅತಿ ಹೆಚ್ಚು ಪ್ರಚಾರ ನೀಡದವು. ಆದರೆ ಅದೇ ವರ್ಷದಲ್ಲಿ 1,250 ದಲಿತ ಮಹಿಳೆಯರ ಮೇಲೆ ದೌರ್ಜನ್ಯ ನಡೆದರೂ ಯಾವುದೇ ರೀತಿಯ ಪ್ರಚಾರ ಸಿಗದಿರುವುದು ವಿಷಾದನೀಯ ಎಂದರು.

ಕಲಬುರ್ಗಿ ವಿವಿಯ ಬೌದ್ಧ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಡಾ. ಎಸ್‌.ಪಿ. ಮೇಲಕೇರಿ ಅಧ್ಯಕ್ಷತೆ ವಹಿಸಿದ್ದರು. ಡಾ. ಶಿಲಾಧರ ಮುಗಳಿ, ಡಾ. ಶಿವರುದ್ರ ಕಲ್ಲೋಳಕರ, ಡಾ.ಪ್ರಭಾಕರ ಕಾಂಬಳೆ ಇದ್ದರು.

ಕೃಪೆ: ಕನ್ನಡಪ್ರಭ