ಅಧಿಕಾರಿಗಳನ್ನು ದೂರವಿಟ್ಟು ಜನರಿಂದ ಸಲಹೆ ಪಡೆದು ಆಡಳಿತ ನಡೆಸುತ್ತೇನೆ ಬೆಂಗಳೂರಿನಲ್ಲಿ ದಲಿತರೊಂದಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸಂವಾದ
ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಬಹುಮತ ಪಡೆದರೆ ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಜೆಡಿಎಸ್‌ನ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕವು ಸೋಮವಾರ ಪುರಭವನದಲ್ಲಿ ಆಯೋಜಿಸಿದ್ದ ದಲಿತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದು ಮುಖ್ಯಮಂತ್ರಿಯಾಗಿದ್ದ ವೇಳೆ ವಿಧಾನಸೌಧದಲ್ಲಿನ ಅಧಿಕಾರಿಗಳಿಂದ ಕೆಲಸ ಕಲಿಯಲಿಲ್ಲ. ಬದಲಿಗೆ ಗ್ರಾಮವಾಸ್ತವ್ಯ, ಜನಸಂಪರ್ಕ ಸಭೆಗಳ ಮೂಲಕ ಜನರ ಸಮಸ್ಯೆಗಳನ್ನು ಅರಿತು ಯೋಜನೆಗಳನ್ನು ರೂಪಿಸಲಾಯಿತು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಅಧಿಕಾರಿಗಳನ್ನು ದೂರವಿಟ್ಟು, ವಿವಿಧ ಸಂಘಟನೆಗಳ ಮುಖಂಡರ ಮತ್ತು ಜನರ ಸಲಹೆ ಪಡೆದು ಆಡಳಿತ ನಡೆಸಲಾಗುವುದು. ತಿಂಗಳಿಗೊಮ್ಮೆ ಸಭೆ ನಡೆಸುವ ಮೂಲಕ ಸಾಧಕ-ಬಾಧಕ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಜೆಡಿಎಸ್ ಆಡಳಿತ ಚುಕ್ಕಾಣಿ ಹಿಡಿದರೆ ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸಲಾಗುವುದು. ಒಂದು ದಲಿತ ಸಮುದಾಯಕ್ಕೆ ಮತ್ತೊಂದು ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಬಡ್ತಿ ಮೀಸಲಾತಿ ತಿದ್ದುಪಡಿ ಮಸೂದೆಗೆ ಜೆಡಿಎಸ್ ವಿರೋಧ ವ್ಯಕ್ತಪಡಿಸಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಬಡ್ತಿ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಲಾಗಿದೆ ಎಂಬ ಸುದ್ದಿಯನ್ನು ಹಬ್ಬಿಸಲಾಗಿದೆ. ಮಸೂದೆಯನ್ನು ಪ್ರಶ್ನಿಸಿ ಯಾರಾದರೂ ನ್ಯಾಯಾಲಯದ ಮೆಟ್ಟಿಲೇರಿದರೆ ಮತ್ತೆ
ಹಿನ್ನಡೆಯಾಗಲಿದೆ. ಹೀಗಾಗಿ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕು ಎಂಬ ಸಲಹೆ ನೀಡಲಾಯಿತೇ ಹೊರತು ವಿರೋಧ ವ್ಯಕ್ತಪಡಿಸಿಲ್ಲ. ಇನ್ನು ಸರ್ಕಾರಿ ವಲಯಗಳಿಗಿಂತ ಖಾಸಗಿ ವಲಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೀಸಲಾತಿಯನ್ನು ಖಾಸಗಿ ಕ್ಷೇತ್ರಕ್ಕೆ ವಿಸ್ತರಿಸುವುದಕ್ಕೆ ಜೆಡಿಎಸ್‌ನ ಬೆಂಬಲ ಇದೆ. ಇದಕ್ಕೆ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯ ಇದೆ.
ರಾಜ್ಯ ಸರ್ಕಾರವು ಈ ಬಗ್ಗೆ ಪ್ರಸ್ತಾವನೆ ತಯಾರಿಸಿ ಕೇಂದ್ರಕ್ಕೆ ರವಾನಿಸಬೇಕಿದೆ ಎಂದು ತಿಳಿಸಿದರು.
ಸದಾಶಿವ ಆಯೋಗದ ವರದಿಯು ಸೂಕ್ಷ್ಮ ವಿಚಾರವಾಗಿದ್ದು, ದೊಡ್ಡಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಒಂದೆಡೆ ಮಾದಿಗ ಸಮುದಾಯವು ವರದಿ ಅನುಷ್ಠಾನಕ್ಕೆ ಆಗ್ರಹಿಸಿದರೆ, ಮತ್ತೊಂದೆಡೆ ಇತರೆ ಸಮುದಾಯವು ಆತಂಕಕ್ಕೊಳಗಾಗುತ್ತದೆ. ಒಳಪಂಗಡದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಬೇಕು. ವರದಿ ಅನುಷ್ಠಾನಕ್ಕೂ ಮುನ್ನ ಲೋಪದೋಷಗಳಿದ್ದರೆ ಅವುಗಳನ್ನು ಸರಿ ಮಾಡಿ ಮುಂದಿನ ಹೆಜ್ಜೆ ಇಡಬೇಕು. ವರದಿ ಜಾರಿ ಸಂಬಂಧ ಎಲ್ಲರನ್ನೂ ಕರೆದು ಚರ್ಚಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.
ದಲಿತ ಮತ್ತು ಹಿಂದುಳಿದ ವರ್ಗದವರ ವಸತಿ ನಿಲಯ ಸಮಸ್ಯೆ ಸೇರಿದಂತೆ ಆ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಾ ರೀತಿಯ ಕ್ರಮ ಜರುಗಿಸಲಾಗುವುದು. ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಿಂಗಳಿಗೊಮ್ಮೆ ರೈತರ ಸಭೆಯನ್ನು ನಡೆಸಲಾಗುವುದು. ರೈತರು ಸಾಲದ ಸುಳಿಯಲ್ಲಿ ಸಿಲುಕದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಣ ಬಲ ಇರುವವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಆರೋಪವು ಸತ್ಯಕ್ಕೆ ದೂರವಾದುದು. ಹಲವು ನಾಯಕರನ್ನು ಪಕ್ಷವೇ ಹಣ ನೀಡಿ ಚುನಾವಣಾ ಕಣಕ್ಕಿಳಿಸಿದೆ. ಹಣಕ್ಕಾಗಿ ರಾಜಕೀಯ ಮಾಡಿಲ್ಲ. ಎಷ್ಟೋ ಸಮಯದಲ್ಲಿ ನಮ್ಮ ಬಳಿಯೂ ಹಣ ಇಲ್ಲದಿದ್ದಾಗ ಬೇರೆಯವರಿಂದ ಪಡೆದು ನೀಡಲಾಗಿದೆ ಎಂದು ಹೇಳಿದರು.
