ಮುಂಬೈ (ಸೆ.05): ಕೊಲ್ಹಾಪುರದ ಹಿಂದೂ ದೇವಾಲಯದಲ್ಲಿ ಕಾಶ್ಮೀರದ ಜಿಹಾದಿ ಉಗ್ರಗಾಮಿಗಳ ಬಗ್ಗೆ ಪ್ರಚೋದನಾತ್ಮಕ ಕರಪತ್ರಗಳನ್ನು ಸನಾತನ ಸಂಸ್ಥೆ ಹಂಚಿದೆ ಎನ್ನುವ ಮಾಹಿತಿಯನ್ನು ಸಿಬಿಐ ಬಹಿರಂಗಪಡಿಸಿದೆ.

ನರೇಂದ್ರ ದಾಬೋಲ್ಕರ್ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವ ಸಂದರ್ಭದಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದ್ದು, ದಾಬೋಲ್ಕರ್ ಹತ್ಯೆ ಚಾರ್ಜ್’ಶೀಟಲ್ಲಿ ಸಿಬಿಐ ಈ ಅಂಶವನ್ನು ಸೇರಿಸಿದೆ.

2006 ರಲ್ಲಿ ನಡೆದ ಕೋಮುಗಲಭೆಯಲ್ಲಿ ಹಿಂದೂ-ಮುಸ್ಲೀಂ ಧರ್ಮದವರನ್ನು ಪ್ರಚೋದಿಸಲು ಸನಾತನ ಸಂಸ್ಥೆಯವರು ಹಿಂದೂ ದೇವಾಲಯದಲ್ಲಿ ಪ್ರಚೋದನಾತ್ಮಕ ಕರಪತ್ರ ಹಂಚಿದೆ ಎಂದು ಸಿಬಿಐ ಹೇಳಿದೆ.

ದಾಬೋಲ್ಕರ್ ಹತ್ಯೆ ನಡೆದಾಗ ಸನಾತನ ಸಂಸ್ಥೆಯ ಮುಖ್ಯಸ್ಥ ಡಾ.ವೀರೇಂದ್ರ ತಾವಡೆಯವರನ್ನು ಬಂಧಿಸಲಾಗಿತ್ತು. ಇವರ ಜೊತೆ ವಿನಯ್ ಪವಾರ್, ಸಾರಂಗ್ ಅಕೋಲ್ಕರ್ ಹೆಸರು ಕೇಳಿಬಂದಿತ್ತು.

ಕೊಲ್ಹಾಪುರ ಮೂಲದ ಇರ್ಫಾನ್ ಅತ್ತಾರ್ ಎನ್ನುವ ವ್ಯಕ್ತಿ ಕಾಶ್ಮೀರದಲ್ಲಿ ಜಿಹಾದಿ ಉಗ್ರಗಾಮಿಗಳ ತಂಡವನ್ನು ಸೇರಿದ್ದ. ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದ. ಆಗ ಇರ್ಫಾನ್ ಅಮರ್ ರಹೆ ಎನ್ನುವ ಕರಪತ್ರವನ್ನು ಹಿಂದೂ ದೇವಾಲಯದಲ್ಲಿ ಅಂಟಿಸಿ ಕೋಮುಗಲಭೆ ಉರಿ ಹೊತ್ತಿಕೊಳ್ಳಲು ಸನಾತನ ಸಂಸ್ಥೆ ಪ್ರಚೋದಿಸಿತ್ತು ಎಂದು ಸಿಬಿಐ ಹೇಳಿದೆ.