ನವದೆಹಲಿ/ಅಹಮದಾಬಾದ್‌[ಜೂ.12]: ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತದ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ‘ವಾಯು’ ಎಂದು ನಾಮಕರಣ ಮಾಡಲಾಗಿದ್ದು, ಗುರುವಾರ ಬೆಳಗ್ಗೆ ಗುಜರಾತ್‌ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಗುಜರಾತಿನ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ಸಾರಲಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರವುಗೊಳಿಸಲು ಸರ್ಕಾರ ಮುಂದಾಗಿದೆ.

ಈ ನಡುವೆ, ಕಳೆದ ತಿಂಗಳು ಫೋನಿ ಚಂಡಮಾರುತವನ್ನು ನಿರ್ವಹಿಸಿದ ಒಡಿಶಾದಿಂದ ವಿಪತ್ತು ನಿರ್ವಹಣೆ ತಂತ್ರಗಳನ್ನು ತಿಳಿದುಕೊಳ್ಳಲು ಗುಜರಾತಿನ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಮತ್ತೊಂದೆಡೆ, ಗುಜರಾತಿನವರೇ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ‘ವಾಯು’ ಚಂಡಮಾರುತ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಚಂಡಮಾರುತದ ಪರಿಣಾಮ ಕರ್ನಾಟಕದ ಮೇಲೂ ಉಂಟಾಗುವ ಸಾಧ್ಯತೆ ಇದ್ದು, ಗೃಹ ಸಚಿವಾಲಯ ರಾಜ್ಯ ಸರ್ಕಾರದ ಜತೆಗೂ ಸಂಪರ್ಕದಲ್ಲಿದೆ.

ಇದೇ ವೇಳೆ, ತಲಾ 45 ಸಿಬ್ಬಂದಿಯನ್ನು ಹೊಂದಿರುವ ಎನ್‌ಡಿಆರ್‌ಎಫ್‌ನ 26 ತಂಡಗಳನ್ನು ಗುಜರಾತಿನಲ್ಲಿ ಸಕಲ ಉಪಕರಣಗಳೊಂದಿಗೆ ನಿಯೋಜನೆ ಮಾಡಲಾಗಿದೆ. ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಇನ್ನೂ 10 ತಂಡ ಕಳಿಸಲು ಉದ್ದೇಶಿಸಲಾಗಿದೆ.

ಚಂಡಮಾರುತ:

ಅರಬ್ಬೀ ಸಮುದ್ರದಲ್ಲಿ ಕಂಡುಬಂದಿದ್ದ ವಾಯುಭಾರ ಕುಸಿತ ಚಂಡಮಾರುತದ ರೂಪ ಪಡೆದಿದೆ. ಮುಂದಿನ 24 ತಾಸುಗಳಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಗುರುವಾರ ಬೆಳಗ್ಗೆ ಗುಜರಾತಿನ ಪೋರ್‌ಬಂದರ್‌ ಹಾಗೂ ಮಹುವಾ ಕರಾವಳಿ ಮಧ್ಯೆ ಬರುವ ವೆರಾವಲ್‌ ಬಳಿ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಗಂಟೆಗೆ 110ರಿಂದ 135 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಎಚ್ಚರಿಕೆ ನೀಡಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದೆ.

ಚಂಡಮಾರುತದ ಸೂಚನೆ ಲಭಿಸಿದ ಹಿನ್ನೆಲೆಯಲ್ಲಿ ಗುಜರಾತ್‌ ಸರ್ಕಾರ ಕಟ್ಟೆಚ್ಚರ ಸಾರಿದೆ. ಚಂಡಮಾರುತ ಅಪ್ಪಳಿಸುವ ಪ್ರದೇಶಗಳ ಸರ್ಕಾರಿ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಿದೆ. ಕಛ್‌ನಿಂದ ದಕ್ಷಿಣ ಗುಜರಾತ್‌ವರೆಗೆ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ. ಕರಾವಳಿಯಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ವಿಜಯ್‌ ರೂಪಾನಿ ತಿಳಿಸಿದ್ದಾರೆ.

ಈ ನಡುವೆ, ಗುಜರಾತಿನ ಅಧಿಕಾರಿಗಳು ಒಡಿಶಾ ಸರ್ಕಾರದ ಜತೆ ಸಂಪರ್ಕದಲ್ಲಿದ್ದಾರೆ. ವಿಪತ್ತು ನಿರ್ವಹಣೆ ತಂತ್ರಗಳ ಅನುಷ್ಠಾನವನ್ನು ತಿಳಿದುಕೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಏತನ್ಮಧ್ಯೆ, ದೆಹಲಿಯಲ್ಲಿ ಸಭೆ ನಡೆಸಿರುವ ಗೃಹ ಸಚಿವ ಅಮಿತ್‌ ಶಾ, ಜನರನ್ನು ಸುರಕ್ಷಿತವಾಗಿ ಸ್ಥಳಾಂತರಗೊಳಿಸುವಂತೆ ಸೂಚಿಸಿದ್ದಾರೆ. ಇದೇ ವೇಳೆ, ಚಂಡಮಾರುತದಿಂದ ತೊಂದರೆ ಉಂಟಾಗಬಹುದಾದ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ಗೋವಾ, ದಮನ್‌ ಹಾಗೂ ದಿಯುನಂತಹ ರಾಜ್ಯಗಳ ಜತೆಗೂ ಗೃಹ ಸಚಿವಾಲಯ ಸಂಪರ್ಕದಲ್ಲಿದೆ. ಕರಾವಳಿ ಕಾವಲು ಪಡೆ, ನೌಕಾಪಡೆ, ಸೇನೆ ಹಾಗೂ ವಾಯುಪಡೆ ಘಟಕಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.