Asianet Suvarna News Asianet Suvarna News

ಭಾರತಕ್ಕೂ ಅಪ್ಪಳಿಸಲಿದೆ ಚಂಡಮಾರುತ ! ಕಾದಿದೆಯಾ ಅಪಾಯ?

ವಾಯುಭಾರ ಕುಸಿದಿರುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಈಗಾಗಲೇ ಬಿರುಸಿನ ಮಳೆಯಾಗುತ್ತಿದೆ. ಮಲ್ಪೆ ತೀರದಲ್ಲಿ ಸಮುದ್ರದ ಅಲೆಗಳ ಅಬ್ಬರ ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಬಂದರು ಇಲಾಖೆ ಈಗಾಗಲೇ ಉಡುಪಿಯ ಮಲ್ಪೆ ಬಂದರಿನಲ್ಲಿ ರೆಡ್‌ ಅಲರ್ಟ್‌ ಘೋಷಿಸಿದೆ.

Cyclone to hit India Red alert declared
Author
Bengaluru, First Published Oct 5, 2018, 9:39 AM IST

ಬೆಂಗಳೂರು: ಕರಾವಳಿ ಭಾಗದಲ್ಲಿ ವಿಪರೀತ, ಬೆಂಗಳೂರು, ಕೊಡಗು, ಚಿಕ್ಕಬಳ್ಳಾಪುರದಲ್ಲಿ ಸಾಧಾರಣ, ಮಂಡ್ಯ ಜಿಲ್ಲೆಯಲ್ಲಿ ಬಿರುಗಾಳಿ ಮಳೆ ಅಬ್ಬರ. ಇದು ಗುರುವಾರ ರಾಜ್ಯಾದ್ಯಂತ ಕಂಡುಬಂದ ಮಳೆಯ ಲಕ್ಷಣ. ಕರಾವಳಿಯಲ್ಲಿ ಹಲವು ದಿನಗಳಿಂದ ಮಾಯವಾಗಿದ್ದ ಮಳೆ ದೊಡ್ಡ ಪ್ರಮಾಣದಲ್ಲಿಯೇ ಮರುಪ್ರವೇಶ ಪಡೆದಿದೆ.

ವಾಯುಭಾರ ಕುಸಿದಿರುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಈಗಾಗಲೇ ಬಿರುಸಿನ ಮಳೆಯಾಗುತ್ತಿದೆ. ಮಲ್ಪೆ ತೀರದಲ್ಲಿ ಸಮುದ್ರದ ಅಲೆಗಳ ಅಬ್ಬರ ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಬಂದರು ಇಲಾಖೆ ಈಗಾಗಲೇ ಉಡುಪಿಯ ಮಲ್ಪೆ ಬಂದರಿನಲ್ಲಿ ರೆಡ್‌ ಅಲರ್ಟ್‌ ಘೋಷಿಸಿದೆ. ಸಮುದ್ರದಲ್ಲಿ ಚಂಡಮಾರುತ ಏಳುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ಮೀನುಗಾರರು ಅ.10ರ ವರೆಗೂ ಸಮುದ್ರಕ್ಕೆ ತೆರಳದಂತೆ ಧ್ವನಿವರ್ಧಕದಲ್ಲಿ ಎಚ್ಚರಿಸಲಾಗುತ್ತಿದೆ.

ಶನಿವಾರದಿಂದ (ಅ.6) ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಇದೆ. ಮುಂದಿನ 4 ರಿಂದ 5 ದಿನಗಳಲ್ಲಿ ಸಮುದ್ರದಲ್ಲಿ ವಿಪರೀತ ಮಳೆಯಾಗಲಿದೆ. ಜೊತೆಗೆ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿಯೂ ಬೀಸಲಿದ್ದು, ಇದು ಕರಾವಳಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಕಳೆದೊಂದು ವಾರದಿಂದ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ 300 ರಿಂದ 400 ಬೋಟ್‌ಗಳು ವಾಪಸ್‌ ಮರಳುತ್ತಿವೆ. ಈಗಾಗಲೇ 20ಕ್ಕೂ ಹೆಚ್ಚು ತಮಿಳುನಾಡು ಬೋಟ್‌ಗಳು ಕೂಡ ಮಲ್ಪೆ ಬಂದರಿಗೆ ಬಂದು ನಿಂತಿವೆ.

ಮಂಡ್ಯ ಜಿಲ್ಲೆಯಲ್ಲಿ ಬಿರುಗಾಳಿ ಮಳೆ:  ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ, ಕಿಕ್ಕೇರಿ ಸೇರಿದಂತೆ ಹಲವು ಕಡೆ ಬಿರುಗಾಳಿ ಮಳೆಯಾಗಿದೆ. ಇದರ ಪರಿಣಾಮ ತಂಗಿನ ಮರಗಳು ಉರುಳಿ ಬಿದ್ದಿವೆ. ನಾಗಮಂಗಲ ಪಟ್ಟಣದಲ್ಲಿಯೂ ಧಾರಾಕಾರ ಮಳೆಯಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಅಂತರ್ಜಲ ಕುಸಿತದಿಂದಾಗಿ ನಿಂತುಹೋಗಿದ್ದ ಹಲವು ರೈತರ ಕೃಷಿ ಪಂಪ್‌ ಸೆಟ್‌ಗಳಿಗೆ ಜೀವ ಬಂದಿದೆ.

ಕೊಡಗು, ಚಿಕ್ಕಬಳ್ಳಾಪುರದಲ್ಲಿ ಸಾಧಾರಣ ಮಳೆ:  ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಧ್ಯಾಹ್ನ 3 ಗಂಟೆಯಿಂದ ಕೆಲ ಕಾಲ ಮಳೆ ಸುರಿಯಿತು. ಸೋಮವಾರಪೇಟೆ, ಸುಂಟಿಕೊಪ್ಪ, ಮುಕ್ಕೊಡ್ಲು, ಮಾದಾಪುರ ಸೇರಿದಂತೆ ಕೆಲವೆಡೆ ಮಳೆಯಾಗಿದೆ. ಚಿಕ್ಕಬಳ್ಳಾಪುರದಲ್ಲಿ ಮುಂಗಾರು ಪೂರ್ವದಲ್ಲಿ ಅಬ್ಬರಿಸಿದ ಮಳೆ ಮಾಯವಾಗಿತ್ತು. ಆದರೆ, ಗುರುವಾರ ಧಾರಾಕಾರ ಮಳೆ ದಾಖಲಾಗಿದೆ. ಈಗಾಗಲೇ ಬೆಳೆದ ಬೆಳೆಗಳೆಲ್ಲವೂ ಒಣಗಿ ಹೋಗಿರುವುದರಿಂದ ಮಳೆ ಬಂದರೂ ರೈತರ ಮುಖದಲ್ಲಿ ಸಂತಸ ಕಾಣಿಸುತ್ತಿಲ್ಲ.

Follow Us:
Download App:
  • android
  • ios