Asianet Suvarna News Asianet Suvarna News

ಸೈನೈಡ್ ಮೋಹನ್'ಗೆ ಗಲ್ಲಿಗೆ ಬದಲಾಗಿ ಸಾಯುವವರೆಗೂ ಜೈಲು

ಮೋಹನ್ ಮೂಲತಃ ಶಿಕ್ಷಕ. 2002ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದ. ಅನಿತಾ ಎಂಬಾಕೆಯನ್ನು ಬಂಟ್ವಾಳದಿಂದ ಹಾಸನಕ್ಕೆ ಕರೆದೊಯ್ದು 2009ರ ಜೂನ್ 18ರಂದು ಲಾಡ್ಜ್‌ನಲ್ಲಿರಿಸಿ, ದೈಹಿಕ ಸಂಪರ್ಕ ಬೆಳೆಸಿದ್ದ. ನಂತರ ಸೈನೈಡ್ ನೀಡಿ, ಇದನ್ನು ಸೇವಿಸಿ ಮೂತ್ರ ಮಾಡಿದರೆ ಗರ್ಭ ಧರಿಸುವುದಿಲ್ಲ ಎಂದು ಹೇಳಿದ್ದ. ಅದರಂತೆ ಸೈನೈಡ್ ಸೇವಿಸಿದ್ದ ಅನಿತಾ, ಮೂತ್ರ ಮಾಡಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮಹಿಳೆಯರ ಶೌಚಾಲಯಕ್ಕೆ ಹೋಗಿ ಅಲ್ಲಿಯೇ ಸಾವನ್ನಪ್ಪಿದ್ದಳು. ಹೀಗೆ 2004ರಿಂದ 2010ರ ಅವಧಿಯಲ್ಲಿ ಮೈಸೂರು, ಹಾಸನ, ಉಡುಪಿ, ಮಂಗಳೂರು, ಬೆಂಗಳೂರು ಸೇರಿದಂತೆ ವಿವಿಧೆಡೆ ಇನ್ನು 19 ಮಹಿಳೆಯರಿಗೆ ಸೈನೈಡ್ ನೀಡಿ ಕೊಲೆಗೈದ ಆರೋಪ ಮೋಹನ್ ಮೇಲಿದ್ದು, ಈಗಾಗಲೇ ಮೂರು ಪ್ರಕರಣದಲ್ಲಿ ಗಲ್ಲು ಹಾಗೂ ಒಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಇನ್ನು 16 ಪ್ರಕರಣ ವಿಚಾರಣೆಗೆ ಬಾಕಿ ಇವೆ. ಇದರಿಂದ ಆತ ಸೈನೈಡ್ ಮೋಹನ್ ಎಂದು ಕುಖ್ಯಾತಿ ಪಡೆದ.

Cyanide Mohan get life term

ಬೆಂಗಳೂರು(ಅ.12): ಬಂಟ್ವಾಳ ಮೂಲದ ಅನಿತಾ ಎಂಬಾಕೆಗೆ ಸೈನೈಡ್ ನೀಡಿ ಕೊಲೆಗೈದ ಮತ್ತು ಆಕೆಯ ಚಿನ್ನಾಭರಣಗಳನ್ನು ದೋಚಿದ್ದ ಪ್ರಕರಣದ ಅಪರಾಧಿಯಾದ ಕುಖ್ಯಾತ ಸೀರಿಯಲ್ ಕಿಲ್ಲರ್ ಮೋಹನ್ ಕುಮಾರ್ ಅಲಿಯಾಸ್ ಸೈನೈಡ್ ಮೋಹನ್‌ಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಮಾರ್ಪಡಿಸಿರುವ ಹೈಕೋರ್ಟ್, ಜೀವಿತಾವಧಿಯ ಕೊನೆಯವರೆಗೂ ಜೈಲು ಶಿಕ್ಷೆ ವಿಧಿಸಿ ಗುರುವಾರ ಅಂತಿಮ ತೀರ್ಪು ನೀಡಿದೆ.

ಪ್ರಕರಣದಿಂದ ತನ್ನನ್ನು ಖುಲಾಸೆಗೊಳಿಸಿ, ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆ ರದ್ದುಪಡಿಸುವಂತೆ ಕೋರಿ ಅಪರಾಧಿ ಮೋಹನ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಹಾಗೆಯೇ, ಗಲ್ಲು ಶಿಕ್ಷೆ ಕಾಯಂಗೊಳಿಸುವಂತೆ ರಿಜಿಸ್ಟ್ರಾರ್ ಜನರಲ್ ಪ್ರತ್ಯೇಕ ಕ್ರಿಮಿನಲ್ ರೆಫರ್ಡ್ ಕೇಸ್ ಅರ್ಜಿ ಸಲ್ಲಿಸಿದ್ದರು.

ಈ ಎರಡೂ ಅರ್ಜಿಗಳ ವಿಚಾರಣೆಯನ್ನು ಬುಧವಾರವೇ ಪೂರ್ಣಗೊಳಿಸಿ ತೀರ್ಪಿನ ಉಕ್ತಲೇಖನ ಆರಂಭಿಸಿದ್ದ ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠವು ಪ್ರಕರಣದಲ್ಲಿ ಮೋಹನ್ ತಪ್ಪಿತಸ್ಥ ಎಂದು ತೀರ್ಮಾನಿಸಿತು. ಬಳಿಕ ಜೀವಿತಾವಧಿಯ ಕೊನೆಯವರೆಗೂ ಜೈಲು ಶಿಕ್ಷೆ ವಿಧಿಸಿ, ಅಪರಾಧಿಯನ್ನು ಬದುಕಿರುವವರೆಗೂ ಜೈಲಿನಿಂದ ಬಿಡುಗಡೆ ಮಾಡಬಾರದು ಮತ್ತು ಮೋಹನ್ ಯಾವುದೇ ಕ್ಷಮಾದಾನವಿಲ್ಲದ ಜೀವನದ ಕಡೇ ಗಳಿಗೆಯವರೆಗೂ ಸೆರೆಮನೆ ವಾಸ ಅನುಭವಿಸಬೇಕು ಎಂದು ಆದೇಶಿಸುವ ಮೂಲಕ ಗುರುವಾರ ಮಧ್ಯಾಹ್ನದ ವೇಳೆಗೆ ತೀರ್ಪು ಪ್ರಕಟ ಪ್ರಕ್ರಿಯೆ ಪೂರ್ಣಗೊಳಿಸಿತು.

ಇನ್ನು 2 ಪ್ರಕರಣ ಬಾಕಿ

ಇದರೊಂದಿಗೆ ಮೂವರು ಮಹಿಳೆಯರ ಕೊಲೆ ಹಾಗೂ ದರೋಡೆ ಆರೋಪದಲ್ಲಿ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯ ಪ್ರಕರಣಗಳ ಪೈಕಿ, ಒಂದು ಪ್ರಕರಣವನ್ನು ಹೈಕೋರ್ಟ್ ಬಗೆಹರಿಸಿತು. ಇನ್ನೆರಡು ಪ್ರಕರಣ ಬಾಕಿ ಉಳಿದಿದ್ದು, ಮುಂದಿನ ಪ್ರಕರಣದ ವಿಚಾರಣೆಯನ್ನು ಅ.೨೩ಕ್ಕೆ ನಡೆಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ. ಜತೆಗೆ, ವಿಚಾರಣೆಗೆ ಖುದ್ದು ಹಾಜರಾಗಿದ್ದ ಮೋಹನ್‌ನನ್ನು ಜೈಲಿಗೆ ವಾಪಸ್ ಕರೆದುಕೊಂಡು ಹೋಗಿ, ಅ.೨೩ರಂದು ಮತ್ತೆ ಕರೆತರುವಂತೆ ಜೈಲಾಧಿಕಾರಿಗಳಿಗೆ ನಿರ್ದೇಶಿಸಿತು.

ವಿಚಾರಣೆ ವೇಳೆ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ವಿಜಯ್ ಕುಮಾರ್ ಮಜಗೆ ವಾದ ಮಂಡಿಸಿ, ಅನಿತಾಳನ್ನು ಪೂರ್ವಯೋಜಿತವಾಗಿ ಕೊಲೆ ಮಾಡಿರುವುದರಿಂದ ಮೋಹನ್ ಗಲ್ಲು ಶಿಕ್ಷೆ ಕಾಯಂಗೊಳಿಸಬೇಕು ಎಂದು ಕೋರಿದರು. ಮತ್ತೊಂದೆಡೆ ಮೋಹನ್, ತನಗೆ ಸಾಧಾರಣ ಜೀವಾವಧಿ ಶಿಕ್ಷೆ ವಿಧಿಸುವಂತೆ ಕೋರಿದ.

ಈ ವಾದ-ಪ್ರತಿವಾದ ಆಲಿಸಿದ ವಿಭಾಗೀಯ ಪೀಠ, ಅನಿತಾ ಸೇರಿ ಇತರೆ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಮೋಹನ್, ನಂತರ ತಪ್ಪಿಸಿಕೊಳ್ಳಲು ವಂಚಿಸಿ ಸೈನೈಡ್ ನೀಡಿ ಕೊಲೆ ಮಾಡಿದ್ದ. ಬಳಿಕ ಮೃತರ ಚಿನ್ನಾಭರಣ ದರೋಡೆ ನಡೆಸಿದ್ದ. ಹೀಗಾಗಿ, ಎಲ್ಲ ಪ್ರಕರಣಗಳು ಒಂದೇ ತೆರನಾಗಿರುವುದರಿಂದ, ಇದು ಅಪರೂಪದಲ್ಲೇ ಅಪರೂಪ ಪ್ರಕರಣ ಎಂದು ಅಭಿಪ್ರಾಯಪಟ್ಟು ಅಧೀನ ನ್ಯಾಯಾಲಯವು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಆದರೆ, ಇದು ಅಪರೂಪದಲ್ಲೇ ಅಪರೂಪ ಪ್ರಕರಣ ಎಂದು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಅಲ್ಲದೆ, ಅನಿತಾ ಮೇಲೆ ಅತ್ಯಾಚಾರ ನಡೆಸಿರುವುದು ಸಾಬೀತಾಗಿಲ್ಲ. ಮೇಲಾಗಿ ಮೃತ ಸಂತ್ರಸ್ತರಿಗೆ ಅಪರಾಧಿಯು ದೈಹಿಕ ಹಿಂಸೆ ಹಾಗೂ ಅಮಾನವೀಯವಾಗಿ ಕಿರುಕುಳ ನೀಡಿ ಕೊಲೆ ಮಾಡಿಲ್ಲ. ಹೀಗಾಗಿ, ಇದೊಂದು ಸಾಮಾನ್ಯ ಅಪರಾಧ ಕೃತ್ಯವಾಗಿದೆ ಎಂದು ಪರಿಗಣಿಸಲಾಗುತ್ತಿದೆ. ಇದರಿಂದ ಬಚ್ಚನ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ಮೋಹನ್‌ಗೆ ಗಲ್ಲು ಶಿಕ್ಷೆ ವಿಧಿಸಲಾಗದು ಎಂದು ಅಭಿಪ್ರಾಯಪಟ್ಟ ಪೀಠ, ಮೋಹನ್‌ಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿತು.

ಶಿಕ್ಷಕ ಮಹಿಳೆಯರಿಗೆ ಕಂಟಕನಾದ

ಆದರೆ ಅಪರಾಧಿ ಮೋಹನ್ ಅನಿತಾರನ್ನು ಕೊಲೆ ಮಾಡಿರುವುದು ಪೂರಕ ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ. ಇನ್ನು ಈತನ ವಿರುದ್ಧ ೨೦೦೪ರ ರಿಂದ ೨೦೧೦ರವರೆಗೆ ೨೦ ಅಮಾಯಕ ಹಾಗೂ ಬಡ ಮಹಿಳೆಯರನ್ನು ತಮ್ಮ ಪ್ರದೇಶಗಳಿಂದ ಅಪರಿಚಿತ ಪ್ರದೇಶಗಳಿಗೆ ಕರೆದೊಯ್ದು ನಂಬಿಸಿ ಕೊಲೆಗೈದು ಹಾಗೂ ಚಿನ್ನಾಭರಣ ದರೋಡೆ ನಡೆಸಿದ ಪ್ರಕರಣಗಳು ದಾಖಲಾಗಿವೆ. ಆ ಪೈಕಿ ಮೂರು ಮಹಿಳೆಯರ ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯದಿಂದ ಗಲ್ಲು ಶಿಕ್ಷೆ ಗುರಿಯಾಗಿದ್ದು, ಒಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಾಗಿದ್ದಾನೆ. ಎಲ್ಲಾ ಅಪರಾಧ ಕೃತ್ಯಗಳು ಗಂಭೀರವಾಗಿದ್ದು, ಸೈನೈಡ್ ಬಳಸಿ ಮಹಿಳೆಯರನ್ನು ಕೊಂದಿರುವುದರಿಂದ ಆತನ ಅಪರಾಧ ಆಲೋಚನೆ ಹೊಂದಿದ್ದ ಎಂಬುದು ತಿಳಿಯುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಮೂಲತಃ ಶಿಕ್ಷಕ

ಮೋಹನ್ ಮೂಲತಃ ಶಿಕ್ಷಕನಾಗಿದ್ದ. ಆದರೆ ವೃತ್ತಿಗೆ ರಾಜೀನಾಮೆ ನೀಡಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡ. ಈತನಿಂದ ಸಮಾಜದ ಅಮಾಯಕ ಮಹಿಳೆಯರು, ಯುವತಿಯರು ಹಾಗೂ ಹೆಣ್ಣುಮಕ್ಕಳ ಹಕ್ಕು ಹಾಗೂ ಜೀವಕ್ಕೆ ಬೆದರಿಕೆಯಿದೆ. ಆದ್ದರಿಂದ ಈತನಿಗೆ ಶ್ರೀನಿವಾಸನ್ ಪ್ರಕರಣದಲ್ಲಿ ಸುಪ್ರೀಂಕೊರ್ಟ್ ಹೇಳಿರುವಂತೆ ಬದುಕಿರುವವರೆಗೂ ಜೈಲು ಶಿಕ್ಷೆ ವಿಧಿಸುವುದು ಸೂಕ್ತ ಮತ್ತು ನ್ಯಾಯಸಮ್ಮತ ಎಂದು ಕೋರ್ಟ್ ತೀರ್ಮಾನಿಸಿತು.

ತದನಂತರ ಮೋಹನ್‌ಗೆ ಜೀವಿತಾವಧಿಯ ಕೊನೆಯವರೆಗೂ ಸಾಧಾರಣ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್, ಆತನನ್ನು ಸಾಯೋವರೆಗೂ ಜೈಲಿನಿಂದ ಬಿಡುಗಡೆ ಮಾಡಬಾರದು. ಅಪರಾಧಿಯು ಕ್ಷಮಾದಾನ ರಹಿತವಾಗಿ ಜೀವಿತಾವಧಿಯವರೆಗೂ ಜೈಲು ಅನುಭವಿಸಬೇಕು. ಉಳಿದಂತೆ ದರೋಡೆ, ಫೋರ್ಜರಿ ಹಾಗೂ ವಂಚನೆ ಸೇರಿ ಇನ್ನಿತರ ಆರೋಪಗಳಿಗೆ ಅಧೀನ ನ್ಯಾಯಾಲಯ ವಿಧಿಸಿದ ಶಿಕ್ಷೆಯು ಯಥಾಸ್ಥಿತಿಯಲ್ಲಿರಲಿದೆ ಎಂದು ಅಂತಿಮ ತೀರ್ಪು ನೀಡಿತು.

Follow Us:
Download App:
  • android
  • ios