ನಕಲಿ ಛಾಪಾ ಕಾಗದ ಹಗರಣದ ಮೂಲಕ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಆರೋಪಿ ಕರೀಂಲಾಲ ತೆಲಗಿ ಪರಪ್ಪನ ಅಗ್ರಹಾರದಲ್ಲಿದ್ದಾನೆ. ಅಲ್ಲಿ ಅವನಿಗೆ ರಾಯಲ್​ ಟ್ರೀಟ್ಮೆಂಟ್​ ನೀಡಲಾಗ್ತಿದೆ. ಅಲ್ಲಿಂದಲೇ ಆತ ತನ್ನ ಅವ್ಯವಹಾರಗಳನ್ನು ಮುಂದುವರಿಸುತ್ತಿದ್ದಾನೆ. ಇಂತದ್ದೊಂದು ದೂರು ಸಿಐಡಿಗೆ ಬಂದಿದೆ

ಬೆಂಗಳೂರು(ಫೆ.06): ನಕಲಿ ಛಾಪಾ ಕಾಗದ ಹಗರಣದ ಮೂಲಕ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಆರೋಪಿ ಕರೀಂಲಾಲ ತೆಲಗಿ ಪರಪ್ಪನ ಅಗ್ರಹಾರದಲ್ಲಿದ್ದಾನೆ. ಅಲ್ಲಿ ಅವನಿಗೆ ರಾಯಲ್​ ಟ್ರೀಟ್ಮೆಂಟ್​ ನೀಡಲಾಗ್ತಿದೆ. ಅಲ್ಲಿಂದಲೇ ಆತ ತನ್ನ ಅವ್ಯವಹಾರಗಳನ್ನು ಮುಂದುವರಿಸುತ್ತಿದ್ದಾನೆ. ಇಂತದ್ದೊಂದು ದೂರು ಸಿಐಡಿಗೆ ಬಂದಿದೆ.

ನಕಲಿ ಛಾಪಾ ಕಾಗದ ಹಗರಣದಲ್ಲಿ ಈಗ ಜೈಲಿನಲ್ಲಿರುವ ಕರೀಂ ಲಾಲಾ ತೆಲಗಿ ಅಲ್ಲಿ ಸುಮ್ನೆ ಕುಳಿತಿಲ್ಲ. ಅಲ್ಲಿಂದಲೇ ಆತ ತನ್ನ ಕಾರ್ಯಭಾರ ಮಾಡುತ್ತಿದ್ದಾನೆ. ಕ್ರಿಮಿನಲ್​'ಗಳ ಹೆಡ್​ ಆಫೀಸು ಪರಪ್ಪನ ಅಗ್ರಹಾರದಲ್ಲಿರುವ ಕರೀಂ ಲಾಲ ತೆಲಗಿಗೆ ಅಲ್ಲಿನ ಅಧಿಕಾರಿಗಳು ರಾಜ ಮರ್ಯಾದೆ ನೀಡುತ್ತಿದ್ದಾರೆ.

ಈ ಬಗ್ಗೆ ಪರಪ್ಪನ ಅಗ್ರಹಾರದಲ್ಲಿ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಮಾಜಿ ಕೈದಿ ಮನೋಜ್​ ಪವಾರ್​ ದೂರು ನೀಡಿದ್ದಾರೆ. ಜೈಲಿನಲ್ಲಿ ಕರೀಂ ಲಾಲಾ ತೆಲಗಿಯ ಅಕ್ರಮದ ಬಗ್ಗೆ ಸಿಐಡಿಯ ಡಿಜಿಪಿ, ರಾಜ್ಯ ಹೈಕೋರ್ಟ್​ ಮುಖ್ಯ ನ್ಯಾಯಾಧೀಶರು ಮತ್ತು ಗೃಹ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ಜೈಲಿನ ಅಧಿಕಾರಿಗಳು ನಕಲಿ ಛಾಪಾ ಕಾಗದ ಹಗರಣದ ಆರೋಪಿಗೆ ರಾಯಲ್​ ಟ್ರೀಟ್ಮೆಂಟ್​ ಕೊಡುತ್ತಿದ್ದಾರೆ. ಆತ ಅಲ್ಲಿ ರಾಜಾರೋಷವಾಗಿ ಮೊಬೈಲ್​ ಬಳಸುತ್ತಿದ್ದಾನೆ. ಜೈಲಿನ ಒಳಗೆ ಕೂತೇ ತನ್ನ ಅವ್ಯವಹಾರಗಳನ್ನು ಮುಂದುವರಿಸಿದ್ದಾನೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೈಲಿನಲ್ಲಿ ಜಾಮರ್​ ಅಳವಡಿಸಿದ್ದರೂ ತೆಲಗಿ ಸೇರಿದಂತೆ ಹೈ ಫೈ ಕೈದಿಗಳ ಅನುಕೂಲಕ್ಕಾಗಿ ಜಾಮರ್​ ಸ್ಥಗಿತ ಮಾಡಲಾಗಿದೆ.

ಜೈಲಲ್ಲೇ ತೆಲಗಿಯ ಹಣಕಾಸು ವ್ಯವಹಾರ!: ಜೈಲಲ್ಲಿ ಕರೀಂಲಾಲಾ ತೆಲಗಿ ವಿವಿಐಪಿ ಕೈದಿ!

ಬೆಳಗಾವಿಯ ಮನೋಜ್​ ಬಿ ಪವಾರ್​ ಕಾರವಾರದ ಕೇಸ್​'ವೊಂದರಲ್ಲಿ ಜೈಲು ಸೇರಿದ್ದ. ಈ ವೇಳೆ ಪರಪ್ಪನ ಅಗ್ರಹಾರದಲ್ಲಿದ್ದಾಗ ತೆಲಗಿಗೆ ಜೈಲಿನ ಅಧಿಕಾರಿಗಳು ನೀಡುತ್ತಿರುವ ರಾಜ ಮರ್ಯಾದೆಯನ್ನ ಕಣ್ಣಾರೆ ಕಂಡಿದ್ದಾರೆ. ತೆಲಗಿ ಕೂಡ ಬೆಳಗಾವಿ ಮೂಲದವನಾಗಿದ್ದು ತನ್ನದೇ ಊರಿನ ಮನೋಜ್​ಗೆ ಜೈಲಿನಲ್ಲೇ 3 ಸಾವಿರ ಹಣ ಕೊಟ್ಟಿದ್ದಾನೆ. ಜೈಲಲ್ಲಿ ಶಿಕ್ಷೆ ಅನುಭವಿಸುತ್ತಿರುವ ತೆಲಗಿಗೆ ಹಣದ ವ್ಯವಹಾರ ಮಾಡಲು ಹೇಗೆ ಸಾಧ್ಯ ಅನ್ನೋ ಅನುಮಾನ ಹುಟ್ಟಿದೆ. ಜೊತೆಗೆ ಜೈಲಿನಲ್ಲಿ ಮಾದಕ ವಸ್ತುಗಳು ರಾಜಾರೋಷವಾಗಿ ಸಿಗುತ್ತವೆ, ಇದಕ್ಕೆಲ್ಲ ಜೈಲು ಅಧಿಕಾರಿಗಳ ಸಹಕಾರ ಇದೆ ಅನ್ನೋದು ಮನೋಜ್​ ಆರೋಪ.

ಪರಪ್ಪನ ಅಗ್ರಹಾರದಲ್ಲಿರುವ ಅಧಿಕಾರಿಗಳಿಗೆ ಹಣದ ವಾಸನೆ ತೋರಿಸಿದರೆ ಸಾಕು, ಏನು ಬೇಕಾದರೂ ಮಾಡಬಹುದು ಎನ್ನುವ ವಾತಾವರಣ ಇರುವುದು ಎಲ್ಲರಿಗೂ ಗೊತ್ತಿರುವುದು ವಿಚಾರ. ಅಂತಹುದರಲ್ಲಿ ಕುಖ್ಯಾತ ವಂಚಕನಿಗೂ ಅಲ್ಲಿ ಹೈಫೈ ಟ್ರೀಟ್​ಮೆಂಟ್​ ಸಿಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.