ಅಸ್ಸಾಂ :  ಅಸ್ಸಾಂ ಸಿಎಂ ಸರ್ಬಾನಂದ್ ಸೋನೋವಾಲ್ ಅವರ  ರ‍್ಯಾಲಿಗೆ ಆಗಮಿಸಿದ್ದ ಮಗುವೊಂದು ಧರಿಸಿದ್ದ ಕಪ್ಪು ಜಾಕೆಟ್ ಒತ್ತಾಯಪೂರ್ವಕವಾಗಿ ತೆಗೆಸಿದ ಘಟನೆ  ಜನವರಿ 29 ರಂದು ನಡೆದಿದೆ. 

ಬಿಸ್ವನಾಥ್ ಜಿಲ್ಲೆಯಲ್ಲಿ  ರ‍್ಯಾಲಿ ನಡೆಯುತ್ತಿದ್ದ ವೇಳೆ ಮೂರು ವರ್ಷದ ಮಗುವೊಂದು ತನ್ನ ಪೋಷಕರ ಜೊತೆಗೆ ರ‍್ಯಾಲಿಗೆ ಆಗಮಿಸಿತ್ತು. ಈ ವೇಳೆ ಮಗು ಕಪ್ಪು ಜಾಕೆಟ್ ಧರಿಸಿದ್ದು, ಈ  ರ‍್ಯಾಲಿಯ ಭದ್ರತಾ ಸಿಬ್ಬಂದಿ ಒತ್ತಾಯಪೂರ್ವಕವಾಗಿ ಮಗುವಿನ ಜಾಕೆಟ್ ತೆಗೆಸಿದ್ದಾರೆ. 

ಮಗುವಿನ ಜಾಕೆಟ್ ತೆಗೆಸಿದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಹಲವರು ಈ ಘಟನೆಯ ಸಂಬಂಧ ಟೀಕೆ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಸ್ವತಃ ಮಗುವಿನ ಪೋಷಕರು ಪ್ರತಿಕ್ರಿಯಿಸಿದ್ದು, ತಮ್ಮ ಮಗು ಕಪ್ಪು ಬಣ್ಣದ ಜಾಕೆಟ್ ಧರಿಸಿತ್ತು. ಇದರಿಂದ  ರ‍್ಯಾಲಿಗೆ ಪ್ರವೇಶ ನೀಡದೇ ನಮ್ಮನ್ನು ತಡೆದು, ಜಾಕೆಟ್ ತೆಗೆಯಲು ಸೂಚಿಸಿದರು.  ಬೆಳ್ಳಂಬೆಳಗ್ಗೆ ಅತ್ಯಂತ ಹೆಚ್ಚು ಚಳಿ ಇತ್ತು. ಕೇವಲ ಅಂಗಿಯೊಂದರಲ್ಲಿ ಮಗುವನ್ನು ಒಳಕ್ಕೆ ಕರೆದೊಯ್ಯಲಾಯಿತು ಎಂದು ಹೇಳಿದ್ದಾರೆ. 

ಇನ್ನು ಈ ಬಗ್ಗೆ ಸ್ಥಳೀಯರು ಕೂಡ ಪ್ರತಿಕ್ರಿಯಿಸಿದ್ದು ಇಲ್ಲಿನ ಪೊಲೀಸರಿಗೆ ಕಪ್ಪು ಬಟ್ಟೆ ಕಂಡರೆ ಒಂದು ರೀತಿಯ ಭಯವಿದ್ದು, ಇದು ಪ್ರತಿಭಟನೆಯ ಸಂಕೇತ ಎಂದು ಭಾವಿಸುತ್ತಾರೆ ಎಂದು ಹೇಳಿದ್ದಾರೆ.