ಮಾವೋವಾದಿಗಳು ದಿನದಿಂದ ದಿನಕ್ಕೆ ಹೊಸ ಪ್ರದೇಶಗಳನ್ನು ಹುಡುಕಲು ಆರಂಭಿಸಿದ್ದಾರೆ. ಇಂಥ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಕೂಡಾ ಸೇರಿದೆ ಎನ್ನುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. 

ನವದೆಹಲಿ : ತಮ್ಮ ಸಾಂಪ್ರದಾಯಿಕ ಭದ್ರಕೋಟೆಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಮಾವೋವಾದಿಗಳು ದಿನದಿಂದ ದಿನಕ್ಕೆ ಹೊಸ ಪ್ರದೇಶಗಳನ್ನು ಹುಡುಕಲು ಆರಂಭಿಸಿದ್ದಾರೆ. ಇಂಥ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಕೂಡಾ ಸೇರಿದೆ. ಈ ಮೂಲಕ ದೇಶದ ಬೇರೆಬೇರೆ ಪ್ರದೇಶಗಳಲ್ಲಿ ತಮ್ಮ ವ್ಯಾಪ್ತಿ ವಿಸ್ತಾರಕ್ಕೆ ಯತ್ನ ಆರಂಭಿಸಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌), ಮಾವೋವಾದಿ ಚಳವಳಿಯು ‘ಸ್ವರ್ಣಮಹೋತ್ಸವ’ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವರದಿಯೊಂದನ್ನು ಸಿದ್ಧಪಡಿಸಿದ್ದು ಅದರಲ್ಲಿ ಈ ಆತಂಕಕಾರಿ ಸಂಗತಿಗಳಿವೆ.

ಮಹಾರಾಷ್ಟ್ರ-ಮಧ್ಯಪ್ರದೇಶ-ಛತ್ತೀಸ್‌ಗಢ ಗಡಿಗಳು ಕೂಡುವ ಸ್ಥಳ, ಕರ್ನಾಟಕ-ಕೇರಳ-ತಮಿಳುನಾಡು ಗಡಿಗಳು ಕೂಡುವ ಸ್ಥಳಗಳಲ್ಲಿ ಮಾವೋವಾದಿಗಳು ಈಗಾಗಲೇ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಶುರು ಮಾಡಿದ್ದಾರೆ. ಇನ್ನು ಪಶ್ಚಿಮ ಬಂಗಾಳ-ಜಾರ್ಖಂಡ್‌ ಹಾಗೂ ಒಡಿಶಾ ಗಡಿಗಳು ಕೂಡುವ ಜಾಗವಾದ ಸಿಂಪ್ಲಿಪಾಲ್‌ ಗಡಿಯ ರಕ್ಷಿತಾರಣ್ಯದಲ್ಲಿ ಸಹಿತ ನಕ್ಸಲೀಯರು ತಮ್ಮ ಹೆಜ್ಜೆಗಳನ್ನು ಮೂಡಿಸಲು ಉದ್ದೇಶಿಸಿದ್ದಾರೆ ಎಂದು ವರದಿ ಹೇಳಿದೆ. ಈ ನಡುವೆ, ಈವರೆಗೆ ತಾವು ತಲೆ ಹಾಕದಿದ್ದ ಉತ್ತರಾಖಂಡದಲ್ಲಿ ಕೂಡ ಮಾವೋವಾದಿ ಚಟುವಟಿಕೆಗಳು ಆರಂಭವಾಗಿವೆ ಎಂಬ ಆತಂಕಕಾರಿ ವಿಚಾರವು ವರದಿಯಲ್ಲಿದೆ.

ಕಳೆದ 10 ವರ್ಷದ ಅವಧಿಯಲ್ಲಿ ಛತ್ತೀಸ್‌ಗಢ, ಜಾರ್ಖಂಡ್‌ ಮತ್ತು ಒಡಿಶಾ ಅರಣ್ಯವನ್ನು ನಕ್ಸಲ್‌ ಮುಕ್ತಗೊಳಿಸಲು ಕೇಂದ್ರ ಸರ್ಕಾರ, ಭಾರೀ ಪ್ರಮಾಣದ ಸಿಆರ್‌ಪಿಎಫ್‌, ಕೋಬ್ರಾ ಪಡೆ, ವಿಶೇಷ ನಕ್ಸಲ್‌ ನಿಗ್ರಹ ಪಡೆ, ರಾಜ್ಯಗಳ ಸಶಸ್ತ್ರ ಪಡೆ ಸಿಬ್ಬಂದಿಯನ್ನು ನಿಯೋಜಿಸಿದೆ. ಜೊತೆಗೆ ಕಳೆದ 3-4 ವರ್ಷಗಳಿಂದ ಅಲ್ಲಿಗೆ ವಾಯುಪಡೆಯ ವಿಶೇಷ ವಿಮಾನ, ಕಾಪ್ಟರ್‌ಗಳನ್ನೂ ಒದಗಿಸುವ ಮೂಲಕ ನಕ್ಸಲ್‌ ನಿಗ್ರಹ ಕಾರ್ಯಾಚರಣೆಗೆ ಮತ್ತಷ್ಟುಬಲತುಂಬಿದೆ. ಜೊತೆಗೆ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳುವ ಮೂಲಕವೂ ನಕ್ಸಲರರಿಗೆ ಪರೋಕ್ಷ ಪೆಟ್ಟುಕೊಟ್ಟಿದೆ.

ಸ್ಥಳಾಂತರಕ್ಕೆ ಕಾರಣ ಏನು?

ಛತ್ತೀಸ್‌ಗಢ, ಜಾರ್ಖಂಡ್‌ ಹಾಗೂ ಬಂಗಾಳ ಭಾಗದಲ್ಲಿನ ತಮ್ಮ ಚಟುವಟಿಕೆಗಳಿಗೆ ಭದ್ರತಾ ಪಡೆಗಳಿಂದ ಅಡ್ಡಿಯಾಗುತ್ತಿದ್ದಂತೆಯೇ ಅವರು ತಮ್ಮ ಪ್ರದೇಶ ಬದಲಿಸುತ್ತಿದ್ದಾರೆ. 2018ರ ಏಪ್ರಿಲ್‌ನಲ್ಲಿ ಮಾವೋವಾದಿಗಳ ಪ್ರಾಬಲ್ಯ 11 ರಾಜ್ಯಗಳ 126 ಜಿಲ್ಲೆಗಳಲ್ಲಿ ಇತ್ತು. ಅದೀಗ 90ಕ್ಕೆ ಇಳಿದಿದೆ. ಅದರಲ್ಲೂ ನಕ್ಸಲ್‌ ಹಿಂಸಾಚಾರ ನಡೆಯುವ ಜಿಲ್ಲೆಗಳ ಸಮಖ್ಯೆ 54ಕ್ಕೆ ಇಳಿದಿದೆ ಎಂಬ ಅಂಶ ಗೃಹ ಇಲಾಖೆಯ ವರದಿಯೊಂದರಲ್ಲಿದೆ.