19 ಜನರನ್ನು ಬಲಿ ಪಡೆದ ರತ್ನಗಿರಿಯ ಡ್ಯಾಮ್| ಏಡಿಗಳಿಂದ ಡ್ಯಾಂ ಒಡೀತು ಎಂದ ಸಚಿವರ ಮನೆ ಮುಂದೆ ಏಡಿ ಸುರಿದು ಪ್ರತಿಭಟನೆ!|
ಮುಂಬೈ[ಜು.10]: 19 ಜನರನ್ನು ಬಲಿ ಪಡೆದ ಇತ್ತೀಚಿನ ರತ್ನಗಿರಿಯ ಡ್ಯಾಮ್ ಒಡೆದ ಘಟನೆಗೆ, ಏಡಿಗಳೇ ಕಾರಣ ಎಂದಿದ್ದ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ತಾನಾಜಿ ಸಾವಂತ್ ವಿರುದ್ಧ ಎನ್‌ಸಿಪಿ ಕಾರ್ಯಕರ್ತರು ಮಂಗಳವಾರ ಏಡಿ ಪ್ರತಿಭಟನೆ ನಡೆಸಿದರು.
ನೂರಾರು ಜೀವಂತ ಏಡಿಗಳನ್ನೇ ಹಿಡಿದು ಚೀಲ, ಬಾಕ್ಸ್‌ಗಳಲ್ಲಿ ತಂದು ಸಾವಂತ್ ಅವರ ಮನೆಯ ಎದುರು ಸುರಿದು ಗಮನ ಸೆಳೆದರು. ಇತ್ತೀಚೆಗೆ ತಿವಾರಿ ಮಿನಿ ಡ್ಯಾಂ ಒಡೆದು ಏಕಾಏಕಿ ನೀರು ಹರಿದ ಪರಿಣಾಮ 19 ಮಂದಿ ಸಾವಿಗೀಡಾಗಿದ್ದರು.
ಡ್ಯಾಂ ಪರಿಶೀಲನೆಗೆ ಬಂದ ಸಚಿವ ಸಾವಂತ್, ಏಡಿಗಳೂ ಇರುವುದೇ ಡ್ಯಾಂ ಒಡೆಯಲು ಕಾರಣ ಎಂದು ಹೇಳಿಕೆ ನೀಡಿದ್ದರು. ಸಾವಂತ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.
