ಇದೀಗ ಕಾಂಗ್ರೆಸಿಗೆ ಬಿಗ್ ಶಾಕ್ ಎದುರಾಗಿದೆ. ಮೈತ್ರಿಯ ಬಗ್ಗೆ ಪಕ್ಷವೊಂದು ಅಪಸ್ವರ ಎತ್ತಿದ್ದು ಮುಂಬರುವ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದ ಪಕ್ಷಕ್ಕೆ ಆಘಾತ ಎದುರಾದಂತಾಗಿದೆ.
ನವದೆಹಲಿ: ಇದೇ ನವೆಂಬರ್-ಡಿಸೆಂಬರ್‌ನಲ್ಲಿ ನಡೆ ಯಲಿರುವ 5 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಮಹಾಮೈತ್ರಿಕೂಟ ರಚಿಸಿ ಕೊಳ್ಳುವ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳಿಗೆ ಹಿನ್ನಡೆಯಾಗಿದೆ. ‘ಪಂಚ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜತೆ ಮೈತ್ರಿ ಮಾಡಿ ಕೊಳ್ಳುವುದಿಲ್ಲ’ ಎಂದು ಸಿಪಿಎಂ ಸ್ಪಷ್ಟಪಡಿಸಿದೆ.
ಶನಿವಾರ ಆರಂಭವಾ ಗಿರುವ ಸಿಪಿಎಂ ಕೇಂದ್ರೀಯ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈಗಾಗಲೇ ಈ ವಿಧಾನಸಭೆ ಚುನಾವಣೆಗಳಲ್ಲಿ ಬಿಎಸ್‌ಪಿ ಹಾಗೂ ಸಮಾಜವಾದಿ ಪಕ್ಷಗಳು ಕಾಂಗ್ರೆಸ್ ಜತೆಗಿನ ಮೈತ್ರಿಯಿಂದ ಹಿಂದೆ ಸರಿದಿವೆ. ಹೀಗಾಗಿ ಸಿಪಿಎಂನ ಈ ನಿರ್ಧಾರ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದೆ.
ಕಾಂಗ್ರೆಸ್ ಜತೆಗಿನ ಮೈತ್ರಿ ಬದಲಾಗಿ, ರಾಜಸ್ಥಾನ ದಲ್ಲಿ 7 ಪಕ್ಷಗಳ ಮೈತ್ರಿಕೂಟದಲ್ಲಿ ಭಾಗಿಯಾಗಲು ಸಿಪಿಎಂ ನಿರ್ಧರಿಸಿದೆ. ಈ ಕೂಟದಲ್ಲಿ ಸಿಪಿಎಂ, ಸಿಪಿಐ, ಸಮಾಜವಾದಿ ಪಕ್ಷ, ಜೆಡಿಎಸ್, ಸಿಪಿಐ-ಎಂಎಲ್, ಆರ್‌ಎಲ್‌ಡಿ ಹಾಗೂ ಎಂಸಿಪಿಐ ಇವೆ. ಈ ಕೂಟಕ್ಕೆ ಬಿಎಸ್‌ಪಿ ಕೂಡ ಸೇರುವ ನಿರೀಕ್ಷೆಯಿದೆ.
ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ಸೇತರ ಸಣ್ಣಪುಟ್ಟ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಇಚ್ಛೆ ಸಿಪಿಎಂಗೆ ಇದೆ. ತೆಲಂಗಾಣದಲ್ಲಿ ಬಹುಜನ ಸಮಾಜ ಪಕ್ಷ ಹಾಗೂ ಎಡರಂಗದ ಮೈತ್ರಿ ಏರ್ಪಡಲಿದೆ ಎನ್ನಲಾಗಿದೆ.
