Asianet Suvarna News Asianet Suvarna News

ಕೇರಳದಲ್ಲಿ ಮತ್ತೆ ರಾಜಕೀಯ ಹಿಂಸಾಚಾರ; ಸಿಪಿಎಂ ಕಾರ್ಯಕರ್ತನ ಮೇಲೆ ಹಲ್ಲೆ

ಕೇರಳದಲ್ಲಿ ರಾಜಕೀಯ ಹತ್ಯೆಗಳು ಬಹಳ ವರ್ಷಗಳಿಂದ ನಡೆಯುತ್ತಲೇ ಇವೆ. ಆದರೆ, ಕಳೆದ 6 ತಿಂಗಳಿನಿಂದ ಹಿಂಸಾಚಾರದ ಪ್ರಮಾಣ ತೀವ್ರತರದಲ್ಲಿ ಹೆಚ್ಚಾಗಿದೆ.

cpm activist attacked in kerala

ಕೋಳಿಕೋಡ್(ಮಾ. 03): ಕೇರಳದಲ್ಲಿ ರಾಜಕೀಯ ಹಿಂಸಾಚಾರ ಮುಂದುವರಿದಿದೆ. ಕೋಳಿಕೋಡ್'ನಲ್ಲಿ ಬಿಜೆಪಿ ಕಚೇರಿ ಮೇಲೆ ಬಾಂಬ್ ಬಿದ್ದ ಬೆನ್ನಲ್ಲೇ ಸಮೀಪದ ಸಿಪಿಎಂ ಕಚೇರಿಗೆ ಬೆಂಕಿ ಬಿದ್ದಿದೆ. ನಂತರ, ಪಾಲಕ್ಕಾಡ್'ನಲ್ಲಿ ಸಿಪಿಎಂ ಕಾರ್ಯಕರ್ತನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. 30 ವರ್ಷದ ಸಿಪಿಎಂ ಕಾರ್ಯಕರ್ತ ರತೀಶ್ ಮತ್ತವನ ಸ್ನೇಹಿತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ರತೀಶ್ ಹೇಳುವ ಪ್ರಕಾರ, ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ರತೀಶ್ ತಾನು ನೀಡಿರುವ ಪೊಲೀಸ್ ದೂರಿನಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ಹೆಸರನ್ನು ಪ್ರಸ್ತಾಪಿಸಿದ್ದಾನೆ.

ಸಂಜೆ 5:30ಕ್ಕೆ ಹಲ್ಲೆ ಘಟನೆ ನಡೆದಿದ್ದು, ಹಲ್ಲೆಕೋರರು ಹಾಗೂ ರತೀಶ್ ನಡುವೆ ರಾಜಕೀಯ ವೈಷ್ಯಮ್ಯವಿತ್ತು ಎಂದು ಹೇಳಿರುವ ಪೊಲೀಸ್ ಅಧಿಕಾರಿಯೊಬ್ಬರು, ಘಟನೆಯ ತನಿಖೆ ಆರಂಭಿಸಿರುವುದನ್ನು ತಿಳಿಸಿದ್ದಾರೆ.

ಬಿಜೆಪಿ ಕಚೇರಿಗೆ ಬಾಂಬ್:
ಹಿಂದಿನ ರಾತ್ರಿಯಂದು ಕೋಳಿಕೋಡ್'ನಲ್ಲಿರುವ ಬಿಜೆಪಿ ಕಚೇರಿಯ ಮೇಲೆ ದುಷ್ಕರ್ಮಿಗಳು ನಾಡ ಬಾಂಬ್'ವೊಂದನ್ನು ಸ್ಫೋಟಿಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಗಾಯವಾಗಿದೆ. ಇದಾದ ಕೆಲ ಹೊತ್ತಿನಲ್ಲೇ ಇದೇ ಪ್ರದೇಶದಲ್ಲಿರುವ ಸಿಪಿಎಂ ಕಚೇರಿಗೆ ಬೆಂಕಿ ಹಚ್ಚಲಾಗಿದೆ.

ಕೇರಳದಲ್ಲಿ ರಾಜಕೀಯ ಹತ್ಯೆಗಳು ಬಹಳ ವರ್ಷಗಳಿಂದ ನಡೆಯುತ್ತಲೇ ಇವೆ. ಆದರೆ, ಕಳೆದ 6 ತಿಂಗಳಿನಿಂದ ಹಿಂಸಾಚಾರದ ಪ್ರಮಾಣ ತೀವ್ರತರದಲ್ಲಿ ಹೆಚ್ಚಾಗಿದೆ. 2016ರ ಮೇ ತಿಂಗಳನಿಂದೀಚೆ ಕಣ್ಣೂರಿನಲ್ಲಿ 400 ರಾಜಕೀಯ ಹಿಂಸಾಚಾರ ಘಟನೆಗಳು ವರದಿಯಾಗಿವೆ. ಈ ಸಂಬಂಧ 600 ಸಿಪಿಎಂ, 280 ಬಿಜೆಪಿ ಹಾಗೂ 52 ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ.

(ಮಾಹಿತಿ: ಎನ್'ಡಿಟಿವಿ)

Follow Us:
Download App:
  • android
  • ios