ನಮ್ಮ ರಾಜ್ಯದಲ್ಲಿ ಕಪ್ಪು ಹಣ ಬಿಳಿ ಮಾಡೋ ದಂಧೆ ಹೇಗೆ ನಡೆಯುತ್ತೆ, ಎಲ್ಲಿ ನಡೆಯುತ್ತೆ? ಯಾರಾರು ಬಚ್ಚಿಟ್ಟ ಕಪ್ಪು ಹಣ ಹೇಗೆ ಹೇಗೆ ಬಿಳಿಯಾಗುತ್ತಿದೆ ಅನ್ನೋದರ ಮಾಹಿತಿ ಪಡೆಯಲು ಸುವರ್ಣನ್ಯೂಸ್ನ ಕವರ್ಸ್ಟೋರಿ ತಂಡ ದೊಡ್ಡ ರಿಸ್ಕ್ ತಗೊಂಡು ರಹಸ್ಯ ಕಾರ್ಯಾಚರಣೆ ಮಾಡಿದೆ.
ಬೆಂಗಳೂರು: ಕಪ್ಪುಹಣವನ್ನು ನಿಗ್ರಹಿಸಲು ಮೋದಿ ಹೊರಡಿಸಿದ ನೋಟು ನಿಷೇಧ ಕ್ರಮದಿಂದ ಕಾಳಧನಿಕರು ಮೈಕೊಡವಿಕೊಂಡು ಎದ್ದಿದ್ದಾರೆ. ವೈಟ್ ಮಾಡಿಕೊಳ್ಳುವ ಮಾರ್ಗಗಳನ್ನ ಹುಡುಕಿಕೊಳ್ಳುತ್ತಿದ್ದಾರೆ. ಈಗ ಗಲ್ಲಿ ಗಲ್ಲಿಯಲ್ಲಿ ಕೇಳಿ ಬರುತ್ತಿದೆ ಕಪ್ಪು ಹಣ ಬಿಳಿ ಮಾಡೋ ಗುಸು ಗುಸು. ಎಲ್ಲರ ಬಾಯಲ್ಲಿ ಪರ್ಸಂಟೇಜ್'ದ್ದೇ ಮಾತು. ಐದರಿಂದ ಪ್ರಾರಂಭ ಆಗೋ ಪರ್ಸಂಟೇಜ್ 45ರವರೆಗೆ ತಲುಪಿದೆ ಅನ್ನೋ ಗುಲ್ಲು.
ಹಾಗಾದ್ರೆ, ಮೋದಿ ಕನಸು ನುಚ್ಚು ನೂರಾಯಿತಾ?
ಇಂಥಾ ಪ್ರಶ್ನೆ ಈಗ ಎಲ್ಲರನ್ನ ಕಾಡುತ್ತಿದೆ. ಯಾಕಂದ್ರೆ ಕಾಳಧನಿಕರ ಹೆಡೆಮುರಿ ಕಟ್ಟಲು ಮೋದಿ 500 ಮತ್ತು 1000 ನೋಟು ರದ್ದು ಮಾಡೋ ನಿರ್ಧಾರ ಮಾಡಿದ್ದರು. ಆದ್ರೆ ಕಾಳಧನಿಕ ಕಪ್ಪು ಪೆಟ್ಟಿಗೆಯೊಳಗೆ ಹೆಡೆಮುಚ್ಚಿ ಕೂತಿದ್ದ ಕಪ್ಪು ಹಣ ಅನ್ನೋ ಕಾಳಿಂಗ ಈಗ ಹೆಡೆ ಬಿಚ್ಚ ತೊಡಗಿದೆ. ಕಳ್ಳದಾರಿಯಲ್ಲಿ ಕಪ್ಪು ಹಣ ಬಿಳಿಯಾಗುತ್ತಿದೆ. ಕೋಟಿ ಕೋಟಿ ಬ್ಲ್ಯಾಕ್ ಮನಿ ವೈಟ್ ಆಗ್ತಿದೆ ಎಂಬ ಆಘಾತಕಾರಿ ಮಾಹಿತಿ ನಮಗೆ ಗೊತ್ತಾಯಿತು. ಹಾಗಾದ್ರೆ ದೇಶಕ್ಕೇ ದ್ರೋಹ ಬಗೆಯೋ ದ್ರೋಹಿಗಳು ಯಾರು? ಅವರಿಗೆ ಸಹಾಯ ಮಾಡುತ್ತಿರುವ ಭ್ರಷ್ಟ ವ್ಯವಸ್ಥೆ ಯಾವುದು? ಅವರ ಈ ಕಾಳ ದಂಧೆ ಹೇಗೆ ನಡೆಯುತ್ತೆ? ಅನ್ನೋದನ್ನ ತಿಳಿಯಲು ಸುವರ್ಣ ನ್ಯೂಸ್'ನ ಕವರ್ ಸ್ಟೋರಿ ತಂಡ ಆಪರೇಷನ್ ಬ್ಲ್ಯಾಕ್ ಆಂಡ್ ವೈಟ್'ಗೆ ಮುಂದಾಯಿತು.
ಬ್ಯಾಂಕ್'ಗಳಲ್ಲೇ ಭ್ರಷ್ಟಾಚಾರ !
ಮೊದಲು ನಾವು ಈ ದಂಧೆಯ ಕುರಿತು ಒಂದಿಷ್ಟು ಗ್ರೌಂಡ್ ವರ್ಕ್ ಮಾಡಿದೆವು. ನಾನಾ ಮಾಹಿತಿದಾರರಿಗೆ ಕರೆ ಮಾಡಿ ಈ ದಂಧೆಯ ಒಳ ಹೊರಗನ್ನು ಅಧ್ಯಯನ ಮಾಡಿದೆವು. ಆಗ ಕೆಲ ಬೆಚ್ಚಿ ಬೀಳಿಸುವ ಮಾಹಿತಿ ಗೊತ್ತಾದವು. ಬ್ಯಾಂಕ್'ನ ಭ್ರಷ್ಟ ಅಧಿಕಾರಿಗಳೇ ಕಾಳಧನಿಕರಿಗೆ ಕಪ್ಪು ಹಣ ಬಿಳಿ ಮಾಡಲು ಸಹಾಯ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಯಿತು. ಈ ಭ್ರಷ್ಟರು ಕಪ್ಪು ಹಣ ಬಚ್ಚಿಟ್ಟ ದೇಶದ್ರೋಹಿಗಳಿಗೆ ನಾನಾ ಕಳ್ಳದಾರಿ ತೋರಿಸಿ ಕಪ್ಪು ಹಣ ಬಿಳಿ ಮಾಡಿಸುತ್ತಿದ್ದಾರೆ. ಇಂಥಾ ಒಂದು ಗಂಭೀರ ಆರೋಪ ನೋಟು ರದ್ದಾದ ದಿನದಿಂದಲೇ ಕೇಳಿ ಬರುತ್ತಿತ್ತು. ಬ್ಯಾಂಕ್'ಗಳಲ್ಲಿ ಇಂಥ ಅವ್ಯವಹಾರ ನಡೆಯುತ್ತೆ ಅನ್ನೋದು ಗೊತ್ತಿದ್ರೂ ಅದಕ್ಕೆ ಪಕ್ಕಾ ಸಾಕ್ಷಿ ಬೇಕಲ್ಲಾ. ಅದಕ್ಕಾಗಿ ಕವರ್ ಸ್ಟೋರಿ ತಂಡ ಒಂದು ಭರ್ಜರಿ ಪ್ಲಾನ್ ಮಾಡಿತು. ಒಂದಿಷ್ಟು ಬ್ಯಾಂಕ್ ಅಧಿಕಾರಿಗಳಿಗೆ ಬಲೆ ಬೀಸಿತು. ಆ ಮೂಲಕ ಆಪರೇಷನ್ ಬ್ಲ್ಯಾಕ್ ಆಂಡ್ ವೈಟ್ ಶುರು ಮಾಡಿತು.
ಬಲೆಗೆ ಬಿತ್ತು ಭ್ರಷ್ಟರ ಗುಂಪು:
ನಾವು ಬೀಸಿದ ಬಲೆಗೆ ಬಿದ್ದೇ ಬಿಟ್ಟಿತು ಭ್ರಷ್ಟರ ಗುಂಪು. ಆ ಗುಂಪು ಯಾವುದು ಗೊತ್ತಾ? ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರೋ ಸುಬ್ರಮಣ್ಯ ಕೋಆಪರೇಟಿವ್ ಬ್ಯಾಂಕ್'ನ ಸಿಬ್ಬಂದಿ. ಈ ಭ್ರಷ್ಟರು ನಮ್ಮನ್ನು ಕಪ್ಪು ಬಿಳಿ ವ್ಯವಹಾರಕ್ಕೆ ನೇರವಾಗಿ ಕರೆದಿದ್ದು ಸುಬ್ರಮಣ್ಯೇಶ್ವರ ಕೋಆಪರೇಟಿವ್ ಬ್ಯಾಂಕ್'ಗೇ. ಅಲ್ಲಿಗೆ ತೆರಳಿದ ನಮ್ಮನ್ನು ಬ್ಯಾಂಕ್ ಸಿಬ್ಬಂದಿ ಮಾತುಕತೆಗೆ ಹೊಟೇಲ್ ಒಂದಕ್ಕೆ ಕರೆದುಕೊಂಡು ಹೋದ್ರು. ಹೋಟೇಲಲ್ಲಿ ಈ ಭ್ರಷ್ಟರು ಕಪ್ಪು ಹಣ ಬಿಳಿ ಮಾಡಲು ಹೇಳಿ ಕೊಟ್ಟ ಪ್ಲಾನ್ ಮಾಡಿದ ಡೀಲ್ ಕೇಳಿ ನೀವೇ ಬೆಚ್ಚಿ ಬೀಳ್ತೀರಾ.
ಲೋನ್ ಹೆಸರಲ್ಲಿ ಜಮಾ:
ನಾವು ಇವರ ಬ್ಯಾಂಕ್'ಗೆ ಹೋಗಿ ಈ ಸಿಬ್ಬಂದಿ ಹೇಳುವ ಲೋನ್ ಅಕೌಂಟಿಗೆ ನಾವು ಕಪ್ಪು ಹಣ ಹಾಕಬೇಕಂತೆ. ಹಾಕಿದ ತತ್'ಕ್ಷಣ ನಮಗೆ ಇನ್ನೊಬ್ಬರು ಹೊಸ ನೋಟಿನ ರೂಪದಲ್ಲಿ ಅಮೌಂಟ್ ಕೊಡ್ತಾರಂತೆ. ಅಷ್ಟೇ ಅಲ್ಲ. ಇದು ಸೇಫ್ ಬ್ಯುಸಿನೆಸ್ ಅಂತೆ. ಯಾಕಂದ್ರೆ ಬ್ಯಾಂಕ್ ಒಳಗೆ ಸಿಸಿ ಕ್ಯಾಮರಾ ಮುಂದೆ ಬ್ಯುಸಿನೆಸ್ ನಡೆಯುತ್ತೆ. ಯಾರಿಗೂ ಅನುಮಾನ ಬರಲ್ಲ, ಅಷ್ಟೇ ಅಲ್ಲ ಮೋಸ ಹೋಗುವ ಪ್ರಶ್ನೆಯೂ ಇಲ್ಲ ಅಂತಾರೆ. ಒಂದೇ ಗಂಟೆಯೊಳಗೆ ಹಣವನ್ನು ವೈಟ್ ಮಾಡಿಕೊಡುತ್ತೇವೆ ಎಂದೂ ಭರವಸೆ ನೀಡುತ್ತಾರೆ.
ಮೊದಲು 50 ಲಕ್ಷ ಬಿಳಿ ಮಾಡಿಕೊಳ್ಳಿ. ಆಗ ನಿಮಗೆ ವಿಶ್ವಾಸ ಬರುತ್ತೆ. ಮುಂದೆ ಹೆಚ್ಚೆಚ್ಚು ಅಮೌಂಟ್ ಮಾಡುತ್ತಾ ಹೋಗಿ ಅಂತ ಕಿವಿ ಮಾತು ಹೇಳಿದರು. ಆಗ ನಾವು ಕಮಿಷನ್ ಎಷ್ಟು ಪರ್ಸಂಟೇಜ್ ಅಂತ ಕೇಳಿದಾಗ ಅವರು ಹೇಳಿದೆಷ್ಟು ಗೊತ್ತಾ? "ಇದೊಂದು ಟೀಮ್ ವರ್ಕ್. ಹಾಗಾಗಿ 35 ಪರ್ಸೆಂಟ್ ಬೇಕೇ ಬೇಕು" ಎನ್ನುತ್ತಾರೆ. ಹೇಗಿದೆ ನೋಡಿ ಬ್ಯಾಂಕೊಳಗೆ ನಡೆಯೋ ಕರಾಳ ದಂಧೆ. ಇಲ್ಲಿ ಈ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿರೋದ್ರಿಂದ ಜನಸಾಮಾನ್ಯ ನೂರಿನ್ನೂರು ರೂಪಾಯಿಗೆ ದಿನಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.
ಹುಟ್ಟಿಕೊಂಡಿದ್ದಾರೆ ಕಮಿಷನ್ ಏಜೆಂಟ್ಸ್:
ಕರೆಂಟ್ ನೀರು ಬಿಲ್ಲು ಕಟ್ಟುವಲ್ಲೂ ನಡೀತಿದೆ ಪರ್ಸಂಟೇಜ್ ದಂಧೆ. ಅಷ್ಟೇ ಏಕೆ ಹೊಟೇಲಲ್ಲೂ ಏಜೆಂಟ್, ಪರ್ಸಂಟೇಜ್ ಮಾತು. ಯಾವಾಗ 500, 1000 ನೋಟು ರದ್ದಾಯಿತೋ ಆವತ್ತಿನಿಂದ ಬರೀ ಕಮಿಷನ್ ಏಜೆಂಟರದ್ದೇ ದರ್ಬಾರು. ಇವರು ಕಪ್ಪು ಹಣವನ್ನ ಬಿಳಿ ಮಾಡುವ ಕಾಂಟ್ರಾಕ್ಟ್ ಪಡೆದು ಭರ್ಜರಿ ಕಮಿಷನ್ ಎತ್ತುತ್ತಿದ್ದಾರೆ ಅನ್ನೋ ಮಾಹಿತಿಯೂ ಕವರ್'ಸ್ಟೋರಿ ತಂಡಕ್ಕೆ ಗೊತ್ತಾಯಿತು. ಹಾಗಾಗಿ ಯಾಕೆ ಈ ಕಮಿಷನ್ ಏಜೆಂಟ್ರನ್ನು ಮಾತಾಡಿಸಬಾರದು? ಯಾಕೆ ಒಂದಿಷ್ಟು ಸೀಕ್ರೆಟ್ ಬಯಲಿಗೆಳೆಯ ಬಾರದು ಅಂತ ನಿರ್ಧರಿಸಿದೆವು. ಪ್ಲಾನ್ ಮಾಡಿ ಕಪ್ಪು ಹಣ ಬಿಳಿ ಮಾಡುತ್ತೇನೆನ್ನುವ ಒಬ್ಬ ಏಜೆಂಟ್ನ ಸಂಪರ್ಕಿಸಿದೆವು.
ಆತನನ್ನು ನಮ್ಮ ಬಳಿಗೆ ಉಪಾಯವಾಗಿ ಕರೆಸಿ ರಹಸ್ಯ ಕಾರ್ಯಾಚರಣೆ ಮಾಡಿದ್ವಿ. ಆಗ ಬಯಲಾಯ್ತು ಕೆಲ ಕುತೂಹಲಕಾರಿ ಮಾಹಿತಿ. ಈತ ಪ್ರತೀ ದಿನ 30-40 ಲಕ್ಷ ಕಪ್ಪುಹಣ ಡೀಲ್ ಮಾಡುತ್ತಾನೆ. ಈತನಿಗೆ 15-16% ಕಮಿಷನ್ ಗ್ಯಾರಂಟಿ. ಆದರೆ, ಈ ಏಜಂಟರಿಗೆ ನಿರಂತರವಾಗಿ ಕ್ಯಾಷ್ ಸಪ್ಲೈ ಆಗುತ್ತದೆ. ಆದರೆ ಹಣ ಎಲ್ಲಿಂದ ಬರುತ್ತೆ ಅನ್ನೋದು ಮಾತ್ರ ಗೊತ್ತಿಲ್ಲ.
ಹೀಗೆ ನಿರಂತವಾಗಿ ಕಪ್ಪು ಹಣ ಬಿಳಿಯಾಗುತ್ತಲೇ ಇದೆ. ಕೇಂದ್ರ ಸರ್ಕಾರ ಇದಕ್ಕೆ ತುರ್ತಾಗಿ ಬ್ರೇಕ್ ಹಾಕಲೇ ಬೇಕು. ಇಲ್ಲದಿದ್ದರೆ ಮೋದಿ ಕನಸು ನುಚ್ಚು ನೂರಾಗೋದ್ರಲ್ಲಿ ಅನುಮಾನವೇ ಇಲ್ಲ. ಇನ್ನು ಕೆಲವು ಕಡೆ ಕಪ್ಪು ಬಿಳಿ ವ್ಯವಹಾರದ ಹೆಸರಲ್ಲಿ ಭಾರೀ ಮೋಸವೂ ನಡೀತಿದೆ. ಅಮಾಯಕರನ್ನು ವಂಚಿಸೋ ಗ್ಯಾಂಗ್'ಗಳು ಹುಟ್ಟಿಕೊಂಡಿವೆ. ಇವರ ನೀವು ಕೇರ್'ಫುಲ್ಲಾಗಿರಿ.
ತನಿಖಾ ವರದಿ: ವಿಜಯಲಕ್ಷ್ಮೀ ಶಿಬರೂರು
